ಬಾಗಲಕೋಟೆ
ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ಅರ್ಜಿಗಳಿಗೆ ಒಂದು ವಾರದೊಳಗೆ ಸೂಕ್ತ ಉತ್ತರ ನೀಡುವಂತಾಗಬೇಕು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ವೆಂಕಟೇಶ್ಚರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರ ಸಮಸ್ಯೆ, ಮುಳುಗಡೆ ಪ್ರದೇಶದಲ್ಲಿ ಮೂಲ ಸೌಕರ್ಯ ಸೇರಿದಂತೆ ಹಲವು ಅರ್ಜಿಗಳು ಬಂದಿದ್ದು ಒಂದು ವಾರದೊಳಗೆ ಅಧಿಕಾರಿಗಳು ಉತ್ತರ ಕೊಡುತ್ತಾರೆ ಎಂದರು.
ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ರಾಜ್ಯ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ಜನಸ್ಪಂದನ ಕಾರ್ಯಕ್ರಮದ ಮೂಲಕ ಜನರ ನೋವಿಗೆ ಸ್ಪಂದನೆ ದೊರೆಯಲಿದೆ. ಜನರಿಗೆ ನ್ಯಾಯ ದೊರಕಿಸುವ ಕಾರ್ಯ ಮಾಡಲಿದೆ. ಇದು ಪ್ರಜಾಪ್ರಭುತ್ವದ ದೊಡ್ಡ ಶಕ್ತಿ, ಪ್ರಜೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇದು ಗ್ರಾಮ ಮಟ್ಟದಲ್ಲೂ ನಡೆದು ಜನರ ಸಮಸ್ಯೆಗೆ ದನಿಯಾಗಲಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಸರಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಸಿಎಂ ಸೂಚನೆಯಂತೆ ನಡೆಸಲಾಗುತ್ತಿದೆ. ಜನಸ್ಪಂದನವನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಶಾಸಕರ ಸೂಚನೆ ಪರಿಗಣಿಸಲಾಗುವುದು. ಮನವಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಲಾಗುವುದು. ಅರ್ಜಿಗಳಿಗೆ ನಿಯಮಿತ ಕಾಲಮಿತಿಯೊಳಗೆ ಪರಿಹಾರ ನೀಡಲಾಗುವುದು. ಅಧಿಕಾರಿಗಳು ಅರ್ಜಿಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸಿ. ಕಾರ್ಯಕ್ರಮದಲ್ಲಿ 111 ಅರ್ಜಿ ಸಲ್ಲಿಕೆಯಾಗಿವೆ ಎಂದರು.
ಜಿಪಂ ಸಿಇಒ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಾಪಂ ಇಒ ಎಂ.ಎಚ್.ದೇಶಪಾಂಡೆ, ಬಿಇಒ ಜಾಸ್ಮೀನ್ ಕಿಲ್ಲೇದಾರ, ಸಿಪಿಐ ಸುನೀಲ ಸವದಿ, ತಹಸೀಲ್ದಾರ್ ನಿಂಗಪ್ಪ ಬಿರಾದಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಸಮಸ್ಯೆ ಆಲಿಸಿದ ಶಾಸಕ
ಜನಸ್ಪಂದನ ಸಭೆಯಲ್ಲಿ ಉದ್ಘಾಟನೆ ನಂತರ ನೇರವಾಗಿ ಜನರ ಅಹವಾಲು ಆಲಿಸಲಾಯಿತು. ಸರದಿಯಲ್ಲಿ ಬಂದ ಸಾರ್ವಜನಿಕರು ಅಹವಾಲು ಅರ್ಜಿ ಸಲ್ಲಿಸಿದ್ದರು. ಜನರ ಅರ್ಜಿಗಳನ್ನು ಸಮಾಧಾನದಿಂದ ಆಲಿಸಿದ ಶಾಸಕ ವಿಜಯಾನಂದ ಕಾಶಪ್ಪನವರ ಕೆಲ ಅರ್ಜಿಗಳಿಗೆ ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿದರು. ಕೆಲ ಅರ್ಜಿಗಳನ್ನು ಕಾಲಮಿತಿಯೊಳಗೆ ಬಗೆಹರಿಸುವುದಾಗಿ ತಿಳಿಸಿದರು. ಅಂದಾಜು ಒಂದು ಗಂಟೆಗೂ ಹೆಚ್ಚು ಕಾಲ ಜನರ ಅಹವಾಲು ಆಲಿಸಲಾಯಿತು.
—–
ಅತಂತ್ರ ಗ್ರಾಮಗಳ ಸಮಸ್ಯೆ ಆಲಿಸೋರಾರು?
ತಾಲೂಕು ಮಟ್ಟದ ಜನಸ್ಪಂದನೆ ಎಂದಿದ್ದರೂ ಹುನಗುಂದ ತಾಲೂಕು ವ್ಯಾಪ್ತಿಯ ಬಾಗಲಕೋಟೆ ಮತಕ್ಷೇತ್ರದ ಅಮೀನಗಡ, ಕಮತಗಿ ಸೇರಿದಂತೆ 18 ಹಳ್ಳಿಗಳ ಜನತೆ ಅತಂತ್ರ ಭಾವ ಎದುರಿಸುವಂತಾಯಿತು. ಜನಸ್ಪಂದನ ಸಭೆಯಲ್ಲಿ ಬಾಗಲಕೋಟೆ ಕ್ಷೇತ್ರದ ಪ್ರತಿನಿಧಿ ಇರದ ಕಾರಣ ಆ ಭಾಗದ ಜನರು ಸಂಖ್ಯೆ ವಿರಳವಾಗಿತ್ತು.