ಸಂಕೇಶ್ವರ: ಕೇಂದ್ರ ಬಿಜೆಪಿ ಸರ್ಕಾರದ ಎಲ್ಲ ರಂಗದಲ್ಲೂ ವಿಫಲವಾಗಿದ್ದು, ರಾಜ್ಯದಲ್ಲಿ ನರೇಂದ್ರ ಮೋದಿ ಹವಾ ಇದೆ ಎನ್ನುತ್ತಿದ್ದು, ಕರ್ನಾಟಕದಲ್ಲಿ ಏನಿದ್ದರೂ ಸಿಎಂ ಸಿದ್ದರಾಮಯ್ಯ ಹವಾ, ಕಾಂಗ್ರೆಸ್ ಪಕ್ಷದ ಹವಾ ಇದೆ. ಮೋದಿ ಹವಾ ಎಲ್ಲಿಯೂ ಕಾಣುತ್ತಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೋಳಿ ವ್ಯಂಗ್ಯವಾಡಿದ್ದಾರೆ.
ಬುಧವಾರ ಪಟ್ಟಣದ ನೇಸರಿ ಗಾರ್ಡನ್‌ದಲ್ಲಿ ಹಮ್ಮಿಕೊಂಡಿದ್ದ ಹುಕ್ಕೇರಿ ವಿಧಾನಸಭೆ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಅಧಿಕಾರಕ್ಕೇರಲು ಜನತೆಗೆ ಸಾಕಷ್ಟು ಭರವಸೆ ನೀಡಿದರು. ಆದರೆ ಇದುವರೆಗೆ ಒಂದೇ ಒಂದು ಭರವಸೆ ಈಡೇರಿಸಲಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಜನರ ಒಲವು ಕಾಣುತ್ತಿದೆ. ಸಂಸದ ಜೊಲ್ಲೆ ವಿರುದ್ಧ ಇಲ್ಲಿನ ಜನರಿಗೆ ಅಸಮಾಧಾನ ಇದೆ. ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಗೆಲುವಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಕರೆ ನೀಡಿದರು.
ತಂದೆ, ಸಚಿವರಾದ ಸತೀಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸ್ಥಳೀಯ ನಾಯಕರು ಹಾಗೂ ಮುಖಂಡರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕೆಲಸ ಮಾಡುವುದರ ಮೂಲಕ ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆಂದು ಭರವಸೆ ನೀಡಿದರು.
ಮಾಜಿ ಸಚಿವ ಎ.ಬಿ. ಪಾಟೀಲ ಮಾತನಾಡಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಪ್ರಿಯಂಕಾ ಜಾರಕಿಹೊಳಿ ಆಯ್ಕೆಯಾಗುವುದು ನಿಶ್ಚಿತ. ಪಕ್ಷದ ಪರ ಉತ್ತಮ ವಾತಾವರಣವಿದೆ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಿದ್ದು, ಚಿಕ್ಕೋಡಿ ಲೋಕಸಭೆ ಮತದಾರರು ಆಶೀರ್ವದಿಸಿ, ಲೋಕಸಭೆಗೆ ಕಳುಹಿಸುವ ಮೂಲಕ ಸೇವೆ ಸಲ್ಲಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.