ನವದೆಹಲಿ:
ಅರೆ ಸೇನಾ ಪಡೆ (paramilitary forces) ಸೇರಿದಂತೆ ವಿವಿಧ ಇಲಾಖೆಗಳಿಗೆ ಆಯ್ಕೆಯಾಗಿರುವ 51 ಸಾವಿರ ಜನರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರ ನೇಮಕಾತಿ ಪತ್ರಗಳ ವಿತರಣೆಗೆ ವರ್ಚುವಲ್ ಆಗಿ ಚಾಲನೆ ನೀಡಿದರು(appointment letters).
ದೇಶದ ಸುಮಾರು 45 ಸ್ಥಳಗಳಲ್ಲಿ ರೋಜ್‌ಗಾರ್ ಮೇಳವನ್ನು (Rozgar Mela) ಆಯೋಜಿಸಲಾಗಿತ್ತು. 8ನೇ ರೋಜ್‌ಗಾರ್ ಮೇಳ ಕುರಿತು ವರ್ಚುಯುಲ್ ಆಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಅರೆ ಸೇನಾ ಪಡೆ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದು, ಯುವಕರಿಗೆ ಹೊಸ ಮಾರ್ಗ ತೆರೆದಿದೆ ಎಂದು ಹೇಳಿದರು.
ಪ್ರಸಕ್ತ ದಶಕದಲ್ಲೇ ಭಾರತವು ಜಗತ್ತಿನ ಮೂರು ಅಗ್ರ ಆರ್ಥಿಕ ರಾಷ್ಟ್ರಗಳ ಪೈಕಿ ಒಂದಾಗಲಿದೆ. ನಾನು ಗ್ಯಾರಂಟಿ ನೀಡಿದ್ದೇನೆ ಎಂದರೆ, ಅದನ್ನು ಖಂಡಿತವಾಗಿಯೂ ನೆರವೇರಿಸಿಯೇ ತೀರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ವೇಳೆ ಹೇಳಿದರು.
ರೋಜ್‌ಗಾರ್ ಮೇಳದಲ್ಲಿ ನೇಮಕಾತಿ ಪತ್ರ ವಿತರಣೆ ಲೈವ್
ಆರ್ಥಿಕತೆ ಬೆಳೆಯಲು ಆಹಾರದಿಂದ ಔಷಧವರೆಗೆ, ಬಾಹ್ಯಾಕಾಶದಿಂದ ನವೋದ್ಯಮಗಳವರೆಗೆ ಎಲ್ಲ ವಲಯಗಳು ಅತ್ಯುತ್ತಮವಾಗಿ ಪ್ರದರ್ಶನ ತೋರುವುದು ಅತ್ಯಗತ್ಯವಾಗಿದೆ. ಬ್ಯಾಂಕಿಂಗ್ ಇಂದು ಸಾಮಾನ್ಯರ ಮನೆ ಬಾಗಿಲಿಗೆ ದೊರೆಯುತ್ತಿದೆ. ಜನ್ ಧನ್ ಯೋಜನೆಯನ್ನು 8 ವರ್ಷಗಳ ಹಿಂದೆ ಆಗಸ್ಟ್ 28ರಂದು ಲಾಂಚ್ ಮಾಡಲಾಯಿತು. ಉದ್ಯೋಗ ಸೃಷ್ಟಿಯಲ್ಲಿ ಈ ಯೋಜನೆಯ ಮಹತ್ವದ ಪಾತ್ರವನ್ನು ನಿರ್ವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅರೆ ಸೇನಾ ಪಡೆಗೆ ನಿಯೋಜನೆಗೊಂಡಿರುವವರು ತಮ್ಮ ಸೇವಾವಧಿಯಲ್ಲೂ ಕಲಿಕೆಯನ್ನು ಮುಂದುವರಿಸಬಹುದಾಗಿದೆ. ಕೌಶಲ ಅಭಿವೃದ್ದಿ ಮತ್ತು ಹೊಸ ಕೋರ್ಸುಗಳಿಗೆ ಹೊಸದಾಗಿ ನೇಮಕವಾಗಿರುವವರು ನೋಂದಣಿ ಮಾಡಿಕೊಳ್ಳಬೇಕು. ಈ ಕೋರ್ಸ್‌ಗಳಲ್ಲಿ ನೀವು ಏನನ್ನು ಕಲಿಯುತ್ತೀರಿ ಅದು ಅತ್ಯುತ್ತಮ ಅಧಿಕಾರಿಯಾಗಲು ನಿಮಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಅವರು ಹೊಸದಾಗಿ ನೇಮಕಗೊಂಡಿರುವವರಿಗೆ ತಮ್ಮ ದೈಹಿಕ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸಲು ಮತ್ತು ಅವರ ಸೇವೆಯ ಉದ್ದಕ್ಕೂ ಅವರ ಆರೋಗ್ಯ ಮತ್ತು ಫಿಟ್‌ನೆಸ್ ಅನ್ನು ಕಾಪಾಡಿಕೊಳ್ಳಲು ಕರೆ ನೀಡಿದರು.
ದೇಶದ 45 ಕಡೆ ರೋಜ್‌ಗಾರ್ ಮೇಳ
ಸೋಮವಾರ ದೇಶದ 45 ಸ್ಥಳಗಳಲ್ಲಿ ರೋಜ್‌ಗಾರ್ ಮೇಳವನ್ನು ಆಯೋಜಿಸಲಾಗಿತ್ತು. ನೇಮಕಾತಿ ಯೋಜನೆಯಡಿ ಕೇಂದ್ರಾಡಳಿತ ಪ್ರದೇಶಗಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆಯೋಜಿಸಲಾಗಿತ್ತು. ಈ ವೇಳೆ, ಹೊಸದಾಗಿ ನೇಮಕಗೊಂಡಿರುವವರೆಗ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಒಟ್ಟು 51,106 ನೇಮಕಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.