ತಿರುಪ್ಪೂರ್: ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27 ರಂದು ತಮಿಳುನಾಡಿನ ತಿರುಪ್ಪೂರ್‌ಗೆ ಭೇಟಿ ನೀಡಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರ ಎನ್ ಮಣ್ಣ್ ಎನ್ ಮಕ್ಕಳ್ ಯಾತ್ರೆ ಮುಕ್ತಾಯಗೊಳ್ಳುವ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಅಣ್ಣಾಮಲೈ ಅವರು ರಾಜ್ಯದ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳ ಪ್ರವಾಸವನ್ನು ಪಲ್ಲಡಂ ವಿಧಾನಸಭಾ ಕ್ಷೇತ್ರದಲ್ಲಿ ಮುಕ್ತಾಯಗೊಳಿಸಲಿದ್ದಾರೆ. 13 ಲಕ್ಷ ಜನರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ಖಚಿತಪಡಿಸಿಕೊಳ್ಳಲು ತಮಿಳುನಾಡು ದೊಡ್ಡ ರೀತಿಯಲ್ಲಿ ಕೊಡುಗೆ ನೀಡಲಿದೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ತಮಿಳುನಾಡು ಬಿಜೆಪಿ ನಾಯಕರ ಪ್ರಕಾರ ಇದು ತಮಿಳುನಾಡಿನಲ್ಲಿ ಬಿಜೆಪಿ ಆಯೋಜಿಸಿರುವ ಅತಿದೊಡ್ಡ ಸಾರ್ವಜನಿಕ ಸಭೆಯಾಗಿದೆ. ಐದು ಲಕ್ಷ ಜನರಿಗೆ ಆಸನ ವ್ಯವಸ್ಥೆ ಇರುತ್ತದೆ ಎಂದು ಕಾರ್ಯನಿರ್ವಾಹಕರೊಬ್ಬರು ಹೇಳಿದ್ದು, ಪಲ್ಲಡಂ ಸಮೀಪದ ಮಾದಾಪುರ ಗ್ರಾಮದಲ್ಲಿ ಪ್ರಧಾನಿ ಪಾಲ್ಗೊಳ್ಳುವ ಸಾರ್ವಜನಿಕ ಸಭೆಗೆ ಬಿಜೆಪಿ ವಿಶಾಲವಾದ ಮೈದಾನವನ್ನು ಸಿದ್ಧಪಡಿಸುವಲ್ಲಿ ನಿರತವಾಗಿದೆ. ಈ ಸಮಾವೇಶದಲ್ಲಿ ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.