Weather Update August 26, 2023:
ದೇಶದಾದ್ಯಂತ ಮಾನ್ಸೂನ್ ನಿಧಾನವಾಗುತ್ತಿದೆ. ಕೆಲವೆಡೆ ಉತ್ತಮ ಮಳೆಯಾಗಿದ್ದರೂ ಕೆಲವೆಡೆ ತಗ್ಗಿದೆ. ಖಾಸಗಿ ಏಜೆನ್ಸಿ ಸ್ಕೈಮೆಟ್ ಪ್ರಕಾರ, ಫಿರೋಜ್’ಪುರ, ಕರ್ನಾಲ್, ಮೀರತ್, ಅಜಂಗಢ, ಪಾಟ್ನಾ, ದಿಯೋಗರ್ ಡೈಮಂಡ್ ಹಾರ್ಬರ್ ಮತ್ತು ಆಗ್ನೇಯದಿಂದ ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಮೂಲಕ ಮಾನ್ಸೂನ್ ಹಾದುಹೋಗುತ್ತಿದೆ. ಸಮುದ್ರ ಮಟ್ಟದಿಂದ 3.1 ರಿಂದ 7.6 ಕಿಮೀ ಎತ್ತರವಿರುವ ಚಂಡಮಾರುತದ ಪರಿಚಲನೆಯು ಪಶ್ಚಿಮ ಉತ್ತರ ಪ್ರದೇಶದ ದಕ್ಷಿಣದ ಕಡೆಗೆ ಸಾಗಿದೆ.
ದೇಶದಲ್ಲಿ ಕಳೆದ 24 ಗಂಟೆಗಳ ಹವಾಮಾನದ ಬಗ್ಗೆ ನೋಡುವುದಾದರೆ ಪೂರ್ವ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಉತ್ತರ ಪಂಜಾಬ್, ಪಶ್ಚಿಮ ಉತ್ತರ ಪ್ರದೇಶ, ಛತ್ತೀಸ್’ಗಢ, ಮಧ್ಯಪ್ರದೇಶ, ಗುಜರಾತ್’ನ ಕೆಲವು ಭಾಗಗಳು, ಕರಾವಳಿ ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಒಂದೆರಡು ಸ್ಥಳದಲ್ಲಿ ಲಘು ಮಳೆಯಾಗಿದೆ.
ಹಿಮಾಚಲ ಪ್ರದೇಶ, ಈಶಾನ್ಯ ಭಾರತ, ಒಡಿಶಾ, ಕರಾವಳಿ ಆಂಧ್ರಪ್ರದೇಶ, ಛತ್ತೀಸ್’ಗಢ, ವಿದರ್ಭ, ಕೊಂಕಣ ಮತ್ತು ಗೋವಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ಉತ್ತರಾಖಂಡ್, ಸಿಕ್ಕಿಂ, ಮಧ್ಯ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಎರಡು ಬಾರಿ ಹಗುರದಿಂದ ಸಾಧಾರಣ ಮಳೆಯಾಗಿದ್ದು, ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗಿದೆ.
ಇಂದು ಈ ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆ:
ಏಜೆನ್ಸಿ ಪ್ರಕಾರ, ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಛತ್ತೀಸ್’ಗಢ, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ಕೊಂಕಣ ಮತ್ತು ಗೋವಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.
ಅದೇ ರೀತಿ, ಬಿಹಾರ, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣದ ಕೆಲವು ಭಾಗಗಳು, ಮಧ್ಯಪ್ರದೇಶದ ಕೆಲವು ಭಾಗಗಳು, ವಿದರ್ಭ, ಮರಾಠವಾಡ, ದಕ್ಷಿಣ ಗುಜರಾತ್, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಒಂದೆರಡು ಕಡೆ ಲಘು ಮಳೆಯಾಗುವ ಸಾಧ್ಯತೆಯಿದೆ.
ಕರ್ನಾಟಕದಲ್ಲಿ ಮಳೆ ಅಪ್ಡೇಟ್ ಹೀಗಿದೆ:
ಜುಲೈ ತಿಂಗಳ ಮಧ್ಯದಲ್ಲಿ ಅಬ್ಬರಿಸಿದ್ದ ಮಳೆರಾಯ ಆ ಬಳಿಕ ಕಣ್ಮರೆಯಾಗಿದ್ದಾನೆ, ಜಲಾಶಯಗಳ ನೀರಿನ ಮಟ್ಟದಲ್ಲೂ ಇದೀಗ ಇಳಿಕೆ ಕಂಡುಬರುತ್ತಿದೆ. ಆಗಸ್ಟ್ ಆರಂಭದಿಂದಲೂ ಇಲ್ಲಿಯವರೆಗೆ ಮಳೆ ಆರ್ಭಟ ಕಡಿಮೆಯಾಗಿದ್ದು, ಇಲಾಖೆ ಮುನ್ಸುಚನೆ ಪ್ರಕಾರ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಮತ್ತೆ ಮಳೆ ಅಬ್ಬರ ಶುರುವಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕಲಬುರಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಮಂಡ್ಯ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದಿನಿಂದ 3 ದಿನಗಳ ಕಾಲ ಮಳೆ ಬೀಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.