ಬೆಂಗಳೂರು: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರಲ್ಲಿ ಗರ್ಭಧಾರಣೆ ಹೆಚ್ಚಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಸುಮಾರು 80 ಸಾವಿರ ಪ್ರಕರಣಗಳು ಪತ್ತೆಯಾಗಿದ್ದು, 2020ರ ನಂತರ ರಾಜ್ಯದಲ್ಲಿ ಅಪ್ರಾಪ್ತರು ಗರ್ಭಧರಿಸಿದ 80,334 ಪ್ರಕರಣಗಳು ಕಂಡುಬಂದಿವೆ.
ಪ್ರಕರಣಗಳನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವುದಕ್ಕಾಗಿ ಸಮಿತಿ ರಚಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆಯಿದ್ದು, ಅಂಕಿಅಂಶಗಳ ಪ್ರಕಾರ, 2020 ರ ಜನವರಿಯಿಂದ ಡಿಸೆಂಬರ್ 2023 ರವರೆಗೆ 9,295 ಪ್ರಕರಣಗಳೊಂದಿಗೆ ಬೆಂಗಳೂರು ನಗರ, 6,325 ಪ್ರಕರಣಗಳೊಂದಿಗೆ ಬೆಳಗಾವಿ ಮತ್ತು 5,512 ಪ್ರಕರಣಗಳೊಂದಿಗೆ ಮೈಸೂರು ಜಿಲ್ಲೆ ಮೊದಲ ಸ್ಥಾನಗಳಲ್ಲಿವೆ.
ಸೂಕ್ಷ್ಮ ಪರಿಸ್ಥಿತಿಯನ್ನು ದೃಢಪಡಿಸಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ, ಅಪ್ರಾಪ್ತ ವಯಸ್ಕರ ಗರ್ಭಧಾರಣೆಯ ಕುರಿತು ವರದಿಯನ್ನು ರಿಪ್ರೊಡಕ್ಟಿವ್ ಚೈಲ್ಡ್ ಹೆಲ್ತ್ ಪೋರ್ಟಲ್‌ನಿಂದ ಪಡೆಯಲಾಗಿದ್ದು, ಅಪ್ರಾಪ್ತ ವಯಸ್ಸಿನ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ಶಾಲೆ ಮತ್ತು ಸಾಕ್ಷರತೆ ಮತ್ತು ಪೊಲೀಸ್ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕಾದ ಸಮಯ ಇದು ಎಂದು ತಿಳಿಸಿದರು.
ಪ್ರತಿ ತಾಲ್ಲೂಕಿನಲ್ಲಿ ತಂಡ ರಚಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿರುವ ಅವರು, ತಹಶೀಲ್ದಾರರು ಈ ಘಟನೆಗಳನ್ನು ಕಡಿಮೆ ಮಾಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸೂಚಿಸಿದ್ದು, ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಮಕ್ಕಳ ಲೈಂಗಿಕ ಅಪರಾಧಗಳ ತಡೆಗಟ್ಟುವಿಕೆ (ಪೋಕ್ಸೊ) ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ನಾಗಸಿಮ ರಾವ್ ವಿವರಿಸಿದರು.