ಮಂಡ್ಯ : ಜೆಡಿಎಸ್ ಪಕ್ಷ ಎನ್ ಡಿಎ ಮೈತ್ರಿಕೂಟ ಬೆಂಬಲಿಸಿರುವುದು ಹಲವು ಜೆಡಿಎಸ್ ಮತ್ತು ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಎರಡೂ ಪಕ್ಷಗಳಿಂದ ಕೆಲ ನಾಯಕರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬಿಜೆಪಿ ಬೆಂಬಲಿಸಿರುವ ಸಂಸದೆ ಸುಮಲತಾ ಮೌನ ನಿಲುವು ತಾಳಿದ್ದಾರೆ. ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ಮೂಲಗಳ ಪ್ರಕಾರ, ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಸಂಸದೆ ಸುಮಲತಾ ಮುನಿಸಿಕೊಂಡಿದ್ದು, ಮೈತ್ರಿ ಬಳಿಕ ಬಿಜೆಪಿ ನಾಯಕರು ನನ್ನೊಂದಿಗೆ ಮಾತನಾಡಿಲ್ಲ. ನಾನಾಗಿ ಏನೂ ಕೇಳಲ್ಲ, ಅವರಾಗೆ ಹೇಳಬೇಕು ಎಂದು ಹೇಳುವ ಮೂಲಕ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ನನ್ನ ನಿರ್ಧಾರ ಹೇಳಲ್ಲ. ಸಮಯ ಬಂದಾಗ ಎಲ್ಲಾ ಮಾತನಾಡ್ತೀನಿ ಎಂದಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ಸೋಲಿಸುವುದೇ ನನ್ನ ಗುರಿ ಎಂದು ಈ ಹಿಂದೆ ಸಂಸದ ಸುಮಲತಾ ಹೇಳಿದ್ದರು. ಇದೀಗ ಬಿಜೆಪಿ ನಾಯಕರ ದಿಢೀರ್ ನಿರ್ಧಾರದಿಂದ ವಿರೋಧಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ಸುಮಲತಾ ಅವರಿಗೆ ಸಾಧ್ಯವಿಲ್ಲ ಎನ್ನಲಾಗಿದೆ. ಹಾಗಾಗಿ, ಅವರು ಯಾವ ನಿರ್ಧಾರಕ್ಕೂ ಬಾರದೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಆಪ್ತರೊಂದಿಗೆ ಸದ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಮೈತ್ರಿ ಬಗ್ಗೆಯಾಗಲಿ, ತನ್ನ ಬಗ್ಗೆಯಾಗಲಿ ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ಆಪ್ತರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸಂಸದೆ ಸುಮಲತಾ ಅವರ ಪತಿ, ನಟ ಅಂಬರೀಶ್ ಮಂಡ್ಯದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಶಾಸಕ, ಸಚಿವ ಆಗಿದ್ದರು. ಅಂಬರೀಶ್ ನಿಧನದ ನಂತರ ಎದುರಾದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕಾಂಗ್ರೆಸ್ ಟಿಕೆಟ್ ಸುಮಲತಾ ಅವರಿಗೆ ಸಿಗಲಿದೆ ಎನ್ನಲಾಗಿತ್ತು. ಆದರೆ, ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಇದ್ದ ಕಾರಣ, ಕಾಂಗ್ರೆಸ್ ಮಂಡ್ಯ ಸೀಟ್ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಬಿಟ್ಟು ಕೊಟ್ಟಿತ್ತು. ಇದರಿಂದ ಮುನಿಸಿಕೊಂಡಿದ್ದ ಸುಮಲತಾ ಲೋಕಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ಬಳಿಕ 2023ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಬೆಂಬಲ ಘೋಷಿಸಿದ್ದರು.
ಅಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿರುದ್ಧವೇ ಸ್ಪರ್ಧಿಸಿ ಗೆಲುವು ದಾಖಲಿಸಿರುವ ಸುಮಲತಾ ಅವರಿಗೆ, ಈಗ ಏಕಾಏಕಿ ಜೆಡಿಎಸ್ ಜೊತೆ ಒಗ್ಗಟ್ಟು ಪ್ರದರ್ಶಿಸುವುದು ಸವಾಲಾಗಿದೆ. ಹಾಗಾಗಿ, ಜೆಡಿಎಸ್-ಬಿಜೆಪಿ ಮೈತ್ರಿ ಕುರಿತು ಏನೂ ಪ್ರತಿಕ್ರಿಯೆ ನೀಡದೆ ತಟಸ್ಥ ನಿಲುವು ತಾಳಿದ್ದಾರೆ.