ಶಿರಸಿ: ನಂಬಿದ ಭಕ್ತಗಣವನ್ನು ಪೊರೆಯುವ ಶಕ್ತಿಪೀಠವೆಂದು ನಾಡಿನಲ್ಲಿ ಪ್ರಸಿದ್ಧವಾದ ಶಿರಸಿ ಶ್ರೀಮಾರಿಕಾಂಬಾ ದೇವಿಯ ದ್ವೈವಾಷಿಕ ಜಾತ್ರೆಗೆ ಮಂಗಳವಾರ ನಾಂದಿಯಾಗಿದ್ದು ಬುಧವಾರ ರಥಾರೋಹಿಯಾಗಿ ಆಗಮಿಸಿ ಜಾತ್ರಾ ಗದ್ದುಗೆಯಲ್ಲಿ ದೇವಿ ವಿರಾಜಮಾನಳಾಗುವ ಮೂಲಕ ಜಾತ್ರೆಗೆ ಮೆರಗು ಬರಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಮಾರಿಕಾಂಬೆ ಮತ್ತು ಮರ್ಕಿದುರ್ಗಿ ದೇವಿಯರಿಗೆ ಹೊಸ ಸೀರೆ ಉಡಿಸಿ ಬಂಗಾರದ ಆಭರಣ ತೊಡಸಲಾಯಿತು. ನಂತರ ವಿಧ್ಯುಕ್ತವಾಗಿ ಮಾರಿಕಾಂಬಾ ವಿವಾಹ ಕಾರ್ಯ ನಡೆದು ಮಧ್ಯರಾತ್ರಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಿತು.ಮಾ.20ರ ಬೆಳಗ್ಗೆ 7.27ರಿಂದ 7.39ರೊಳಗೆ ದೇವಿಯ ರಥಾರೋಹಣವಾಗಲಿದ್ದು ನಂತರ ರಥೋತ್ಸವ, ಶೋಭಾಯಾತ್ರೆ ನಡೆಯಲಿದೆ.
ಮಾರಿಕಾಂಬಾ ಜಾತ್ರೆ ಸ್ಥಳೀಯ ಹಾಗೂ ನಾಡಿನ ನಾನಾ ಜಿಲ್ಲೆ, ಹೊರ ರಾಜ್ಯಗಳ ಲಕ್ಷಾಂತರ ಭಕ್ತರನ್ನು ಸೆಳೆಯಲಿದೆ. ಮಾ.27 ರವರೆಗೆ ಜಾತ್ರೆಯ ವಿಧಿವಿಧಾನಗಳ ನೆರವೇರಲಿದ್ದು ಭಕ್ತರು ಮಾರಿಕಾಂಬೆಗೆ ಸೇವೆ, ಹರಕೆ ಸಲ್ಲಿಸಲಿದ್ದಾರೆ.ಮಂಗಳವಾರ ಗಣಹೋಮ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಹಾಗೇ ಕಲಶ ಪೂಜಿಸಿ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ಈ ವೇಳೆ ಧರ್ಮದರ್ಶಿಗಳು, ಬಾಬದಾರರು, ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಜಯಘೋಷಗಳು, ವಾದ್ಯಗಳು ಮೊಳಗಿದವು.ರಾತ್ರಿ ದೇವಿಯ ಕಲ್ಯಾಣೋತ್ಸವ ವಿಧಿವಿಧಾನಗಳು ನೆರವೇರಿದವು.
ಭಕ್ತರ ಜಯಘೋಷದೊಂದಿಗೆ ರಥವು ಬಿಡಕಿಬಯಲಿನ ಜಾತ್ರಾ ಗದ್ದುಗೆ ಸ್ಥಳಕ್ಕೆ ತೆರಳಲಿದೆ. ಅಲ್ಲಿಮಧ್ಯಾಹ್ನ 1.10ರೊಳಗೆ ಗುದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮಾ.21ರಿಂದ ಬೆಳಗ್ಗೆ 5ರಿಂದ ಜಾತ್ರಾ ಗದ್ದುಗೆಯಲ್ಲಿಮಾರಿಕಾಂಬೆಗೆ ಸೇವೆ ಸಲ್ಲಿಕೆ, ಹರಕೆ ಅರ್ಪಣೆ ಪ್ರಾರಂಭವಾಗಲಿದ್ದು ನಿರಂತರ ಎಳು ದಿನಗಳ ಕಾಲ ಮುಂದುವರೆಯಲಿದೆ. ಮಾ.27ರ ಬೆಳಗ್ಗೆ 10.41ಕ್ಕೆ ದೇವಿ ಗದ್ದುಗೆಯಿಂದ ಏಳುವುದರೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ.