ಬಾಗಲಕೋಟೆ
ತಾಲೂಕಿನ ಸುಕ್ಷೇತ್ರ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಡಿ.೨೬ ರಂದು ಮಹಾರಥೋತ್ಸವ ನಡೆಯಲಿದ್ದು ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ದೇವಸ್ಥಾನ ಜೀರ್ಣೋದ್ಧಾರ ಕಮಿಟಿಯ ಅಧ್ಯಕ್ಷ ಗುರುಬಸವ ಸೂಳಿಭಾವಿ ತಿಳಿಸಿದರು.
ಜಾತ್ರೆಯ ನಿಮಿತ್ತ ಗುರುವಾರ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ಪ್ರತಿವರ್ಷ ಕಾರ್ತಿಕೋತ್ಸವ ಅಂಗವಾಗಿ ಜಾತ್ರಾ ಮಹೋತ್ಸವ ನಡೆಯಲಿದ್ದು ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲ ವಾತಾವರಣ ಕಲ್ಪಿಸಲು ಎಲ್ಲ ಸಿದ್ಧತೆ ಮಾಡಲಾಗುತ್ತಿದೆ. ದೇವಸ್ಥಾನದಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಕೂಡ ಮಾಡಲಾಗಿದೆ ಎಂದರು.
೧೯೭೨ ರಿಂದ ಪ್ರತಿವರ್ಷ ಹೊಸ್ತಿಲ ಹುಣ್ಣಿಮೆಯಂದು ಜಾತ್ರೆ ಆರಂಭಗೊAಡಿದ್ದು ಈ ವರ್ಷ ೫೧ನೇ ವರ್ಷದ ಜಾತ್ರೆ ಆಚರಿಸಲಾಗುತ್ತಿದೆ. ಡಿ.೨೨ ರಿಂದ ವೀರಭದ್ರೇಶ್ವರ ದೇವಸ್ಥಾನದಿಂದ ಗ್ರಾಮದ ಅಗಸಿ ಬಾಗಿಲವರೆಗೆ ಚಿಕ್ಕ ರಥೋತ್ಸವ ಆರಂಭವಾಗಿದ್ದು ಪ್ರತಿದಿನ ಸಂಜೆ ೭ ಗಂಟೆಗೆ ಐದು ದಿನಗಳ ಕಾಲ ನಡೆಯಲಿದೆ. ಡಿ.೨೪ರಂದು ಬೆಳಗ್ಗೆ ಅಯ್ಯಾಚಾರ ಮತ್ತು ಶಿವದೀಕ್ಷೆ ಕಾರ್ಯಕ್ರಮ ಬಿಲ್‌ಕೆರೂರಿನ ಸಿದ್ಧಲಿಂಗ ಶಿವಾಚಾರ್ಯರು ಹಾಗೂ ಚರಂತಿಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದರು.
ಡಿ.೨೬ ರಂದು ಸಂಜೆ ೫ ಗಂಟೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ನಡೆಯಲಿದೆ. ಜಾತ್ರೆಗೆ ಬರುವ ಭಕ್ತರಿಗೆ ದೇವಸ್ಥಾನದ ಮುಂಭಾಗದಲ್ಲಿರುವ ೪ ಎಕರೆ ಜಮೀನಿನಲ್ಲಿ ಸ್ವಚ್ಛಾತಾ ಕಾರ್ಯ ಮುಗಿದಿದ್ದು ಮಂಗಲ ಭವನದಲ್ಲಿ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಡಿ.೨೬ ರಂದು ರಾತ್ರಿ ೧೦.೩೦ಕ್ಕೆ ಹರಹಂತಕರಿಗೊಬ್ಬ ನರಸಿಂಹ ನಾಟಕ ಪ್ರದರ್ಶನಗೊಳ್ಳಲಿದ್ದು ೨೭ರಂದು ಸಂಜೆ ೪ ಗಂಟೆಗೆ ಕುಸ್ತಿ ಪಂದ್ಯ ಆಯೋಜಿಸಲಾಗಿದೆ. ಜಾತ್ರೆಯಲ್ಲಿ ಜನಸಂದಣಿ ಇರುವುದರಿಂದ ಭಕ್ತರು ಮಾಸ್ಕ್ ಹಾಕಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಈರಣ್ಣ ಗಂಗಾವತಿ, ಅರ್ಚಕ ಸಂಗಯ್ಯ ಸರಗಣಾಚಾರಿ, ರಾಚಯ್ಯ ಸರಗಣಾಚಾರಿ, ಚಂದ್ರಶೇಖರ ಶಿಕ್ಕೇರಿ, ರಂಗಪ್ಪ ಜಳೇಂದ್ರ ಇದ್ದರು.