ದಕ್ಷ, ಪ್ರಾಮಾಣಿಕ ಅಧಿಕಾರಿಗೆ ಆತ್ಮೀಯ ಸ್ವಾಗತ
ಬಾಗಲಕೋಟೆ
ಜಿಲ್ಲೆಯ ಹುನಗುಂದ ಹಾಗೂ ಇಳಕಲ್ ಅವಳಿ ತಾಲೂಕಿನ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರದ ಹೆಚ್ಚುವರಿ ಪ್ರಭಾರವನ್ನು ಹುನಗುಂದ ತಾಪಂ ಸಹಾಯಕ ನಿರ್ದೇಶಕ (ಗ್ರಾಉ) ಮುರಳಿಧರ ಎಚ್. ದೇಶಪಾಂಡೆ ವಹಿಸಿಕೊಂಡಿದ್ದಾರೆ.
ಕಳೆದ ಹಲವು ವರ್ಷಗಳ ಹಿಂದೆ ಹುನಗುಂದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಆಗಿ ಕಾರ್ಯ ನಿರ್ವಹಿಸಿದ್ದ ಇವರು ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂಧಿಸುತ್ತಿದ್ದರು. ದಿನದ ಯಾವುದೇ ಅವಧಿಯಲ್ಲಿ ಸಮಸ್ಯೆ ಹೊತ್ತು ಬಂದ ಹಲವರಿಗೆ ಪರಿಹಾರ ರೂಪಿಸಿದ್ದರು.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಬೇರೆಡೆ ವರ್ಗಾವಣೆಗೊಂಡಿದ್ದ ಮುರಳೀಧರ ದೇಶಪಾಂಡೆ ಅವರು ಇದೀಗ ಹುನಗುಂದ ತಾಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕ ಹುದ್ದೆಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಜಿಲ್ಲಾ ಪಂಚಾಯಿತಿ ಇದೀಗ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮುರಳೀಧರ ದೇಶಪಾಂಡೆ ಅವರನ್ನು ಹುನಗುಂದ ಹಾಗೂ ಇಳಕಲ್ ತಾಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಕಾರ್ಯ ನಿರ್ವಾಹಕ ಹುದ್ದೆಯ ಹೆಚ್ಚುವರಿ ಪ್ರಭಾರ ವಹಿಸಿ ಆದೇಶಿಸಿದೆ.
ನೂತನವಾಗಿ ಅವಳಿ ತಾಲೂಕು ಕಾರ್ಯ ನಿರ್ವಾಹಕ ಪ್ರಭಾರ ವಹಿಸಿಕೊಳ್ಳುತ್ತಲೇ ಮುರಳೀಧರ ದೇಶಪಾಂಡೆ ಅವರಿಗೆ ಸನ್ಮಾನದ ಸ್ವಾಗತ ದೊರೆತಿದೆ. ಕಳೆದೆರಡು ದಿನದಿಂದ ಮುರಳೀಧರ ಅವರ ಹಿತೈಸಿಗಳು, ಸಮಾಜದ ಮುಖಂಡರು, ಈ ಹಿಂದೆ ಅವರ ಕೈಕೆಳಗೆ ಕೆಲಸ ಮಾಡಿದ ಸಿಬ್ಬಂದಿ, ಇದೀಗ ಹಲವು ಗ್ರಾಪಂಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿ, ಕೆಲವು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ತಂಡೋತಂಡವಾಗಿ ಅವರ ಕಚೇರಿಗೆ ಆಗಮಿಸಿದ ಹೃದಯ ಪೂರ್ವಕ ಸ್ವಾಗತ ಕೋರುತ್ತಿದ್ದಾರೆ.
ಸನ್ಮಾನದ ಸ್ವಾಗತದ ಕುರಿತಾಗಿ ಮಾತನಾಡಿದ ತಾಪಂ ಇಒ ಮುರಳೀಧರ ದೇಶಪಾಂಡೆ ಅವರು, ಎಲ್ಲರ ಪ್ರೀತಿಗೆ ಮನಸೋತಿದ್ದೇವೆ. ಮುಂಬರುವ ದಿನದಲ್ಲಿ ಅವಳಿ ತಾಲೂಕುಗಳಲ್ಲಿನ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡುತ್ತೇನೆ. ತಮಗೆ ಸನ್ಮಾನದ ಬದಲಾಗಿ ಅಭಿವೃದ್ಧಿಗೆ ಸಲಹೆ, ಸೂಚನೆ ನೀಡಬೇಕು ಎಂದು ವಿನಂತಿಸಿದ್ದಾರೆ.