ಬೆಂಗಳೂರು : ನಾನು ಬಿಡದಿಯ ನನ್ನ ತೋಟವನ್ನಲ್ಲದೆ ಕಾಂಗ್ರೆಸ್ ಕಚೇರಿಯನ್ನು ನನ್ನ ಮುಖ್ಯ ಕಚೇರಿಯನ್ನಾಗಿ ಮಾಡಿಕೊಳ್ಳಲು ಸಾಧ್ಯವೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಬುಧವಾರ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಡದಿ ತೋಟ ಜೆಡಿಎಸ್‌ನ ಹೆಡ್ ಆಫೀಸ್ (ಮುಖ್ಯ ಕಚೇರಿ) ಎಂದು ಟೀಕೆ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದರು.
ನನ್ನ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಆ ವೇಳೆ ಕಾಂಗ್ರೆಸ್ ನಾಯಕರು ಏನೆಲ್ಲ ಮಾಡಿದರು ಎನ್ನುವುದು ನನಗೆ ಗೊತ್ತಿದೆ. ಆಗ ಕಾಂಗ್ರೆಸ್ ನಾಯಕರಲ್ಲಿಯೇ ಯಾಕೆ ಸಂಘರ್ಷ ನಡೆಯಿತು ಎನ್ನುವುದೂ ತಿಳಿದಿದೆ.
ಧರ್ಮಸ್ಥಳದ ಸಿದ್ದವನದಲ್ಲಿ ಏನೇನು ನಡೆಯಿತು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಸರ್ಕಾರ ರಚನೆಯಾದ ಮೂರೇ ತಿಂಗಳಿಗೆ ಲೋಕಸಭೆ ಚುನಾವಣೆ ಹೊತ್ತಿಗೆ ಸರಕಾರ ಹೋಗುತ್ತದೆ ಎಂದು ಹೇಳಿದವರು ಯಾರು? ಐದು ವರ್ಷ ಬೇಷರತ್ ಬೆಂಬಲ ಕೊಡುತ್ತೇವೆ ಎಂದಿದ್ದರು. ಆಮೇಲೆ ಏನಾಯಿತು? ಸಿದ್ದವನದಲ್ಲಿ ಅದಕ್ಕೆ ಔಷಧಿ ಅರೆದರಲ್ಲವೇ ಎಂದು ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಬಿಡದಿಯ ನನ್ನ ತೋಟವೇ ನನ್ನ ಪಕ್ಷದ ಹೆಡ್ ಆಫೀಸ್. ಅದರಲ್ಲಿ ತಪ್ಪೇನಿದೆ? ನಾನು ಪಕ್ಷದ ಅಧ್ಯಕ್ಷ. ಅಲ್ಲಿ ನಾನು ನಮ್ಮ ಪಕ್ಷದ ಕೆಲ ಮುಖಂಡರ ಸಭೆ ಕರೆದಿದ್ದೆ. ಅಲ್ಲದೆ, ನನ್ನ ತೋಟದಲ್ಲಿ 120 ಜನ ಈಗಲೂ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಊಟದ ವ್ಯವಸ್ಥೆ ಮಾಡಿದ್ದೆವು. ಮಾಡಬಾರದು ಎನ್ನುವುದಕ್ಕೆ ಅದೇನು ಕಾಂಗ್ರೆಸ್ ಹೆಡ್ ಆಫೀಸಾ? ಬಿಜೆಪಿಗೆ ಕೇಶವ ಕೃಪ ಹೇಗೋ ನಮ್ಮ ಪಕ್ಷಕ್ಕೆ ನಮ್ಮ ತೋಟದ ಮನೆಯೂ ಹಾಗೆಯೇ ಎಂದು ಕುಟುಕಿದರು.