ಕೊಪ್ಪಳ: ಕನ್ನಡದ ಗಂಧ ಗಾಳಿಯೂ ಗೊತ್ತಿಲ್ಲ, ಕನ್ನಡ ಓದಲು, ಬರೆಯಲು ಬರುವುದಿಲ್ಲ. ಇಂಥವರು ಈ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ. ಇನ್ನು ಆ ಇಲಾಖೆಯ ಗತಿ ಹೇಗೆ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರಿಗೆ ಅದು ಬೇಕಾಗಿಲ್ಲ. ಹೋದಲ್ಲೆಲ್ಲ ಬರಿ, ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಹೇಳುವುದೇ ದೊಡ್ಡ ಕೆಲಸವಾಗಿದೆ ಎಂದರು. ಅಚ್ಚರಿ ಎಂದರೆ ಇದುವರೆಗೂ ಯಾರೊಬ್ಬರಿಗೂ ಯುವನಿಧಿ ನೀಡಿಲ್ಲ. ಆದರೂ ನಾವು ಯುವಕರಿಗೆ ಯುವನಿಧಿ ನೀಡುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿದು ಹೋಗಿದ್ದರಿಂದ ಶೇ. 20 ಕೃಪಾಂಕ ನೀಡಿದ್ದಾರೆ. ಈಗಂತೂ ಪದೇ ಪದೇ ಪರೀಕ್ಷೆ ನಡೆಸುವುದರಿಂದ ಹೈಸ್ಕೂಲ್ ಶಿಕ್ಷಕರು ಬರಿ ಪರೀಕ್ಷಾ ಕರ್ತವ್ಯದಲ್ಲಿಯೇ ನಿರತರಾಗುವಂತೆ ಮಾಡಿದೆ ಎಂದರು.
ಶಿಕ್ಷಣ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ಕೂಡಲೇ ಇಂಥ ಸಚಿವರನ್ನು ಶಿಕ್ಷಣ ಇಲಾಖೆಯಿಂದ ಬದಲಾಯಿಸಿ ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಗ್ಯಾರಂಟಿ ಗುಂಗಿನಲ್ಲಿದೆ. ಅಭಿವೃದ್ಧಿ, ಶಿಕ್ಷಣ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಮಾತನಾಡುತ್ತಲೇ ಇಲ್ಲ.