ಗಡಿ ರಕ್ಷಕರಂತೆ, ಅರಣ್ಯ ರಕ್ಷಕರನ್ನು ಗೌರವಿಸಿ : ಡಾ.ದೇಸಾಯಿ
ನಿಮ್ಮ ಸುದ್ದಿ ಬಾಗಲಕೋಟೆ
ದೇಶದ ಗಡಿ ಕಾಯುವ ಸೈನಿಕರಿಗೆ ಸಿಗುವ ಗೌರವ ಅರಣ್ಯ ರಕ್ಷಕರಿಗೂ ಸಿಗಬೇಕೆಂದು ಬಾಗಲಕೋಟೆಯ ವನ್ಯಜೀವಿ ಪರಿಪಾಲಕ ಡಾ.ಎಂ.ಆರ್.ದೇಸಾಯಿ ಹೇಳಿದರು.
ಗದ್ದನಕೇರಿ ಕ್ರಾಸ್‍ನಲ್ಲಿರುವ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ನಿಮಿತ್ಯ ಹುತಾತ್ಮ ಅರಣ್ಯ ಸಿಬ್ಬಂದಿಗೆ ಹೂಗುಚ್ಚ ಅರ್ಪಿಸಿ ಗೌರವ ಸಮರ್ಪಣೆ ಮಾಡಿ ಅವರು ಮಾತನಾಡಿದರು. ದಟ್ಟ ಕಾಡಲ್ಲಿ ರಸ್ತೆ ದೀಪಗಳ ಅನುಕೂಲಗಳಿಲ್ಲದ ನಿರ್ಜನ ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದು ಕಷ್ಟದ ಕಾರ್ಯವಾಗಿದೆ ಎಂದರು.
ಅರಣ್ಯ ಸಿಬ್ಬಂದಿ ತನ್ನ ಪ್ರಾಣ ಪಣಕ್ಕಿಟ್ಟು ಹೋರಾಡುವ ಸಂದರ್ಭವನ್ನು ನಾವು ಗಮನಿಸುತ್ತಿದ್ದೇವೆ. ಕಾಡುಗಳ್ಳ ವೀರಪ್ಪನ್ ಅನೇಕ ಅರಣ್ಯ ಸಿಬ್ಬಂದಿಗಳನ್ನು ನಿರ್ದಾಕ್ಷಣ್ಯವಾಗಿ ಕೊಂದಿದ್ದಾನೆ. ಇಂದು ಕೂಡಾ ಅರಣ್ಯ ರಕ್ಷಕರಿಗೆ ಸರಿಯಾದ ರಕ್ಷಣೆ ಇಲ್ಲ. ಆತ್ಮರಕ್ಷಣೆಗಾಗಿ ಅವರಿಗೆ ಅತ್ಯಾದುನಿಕ ಸಲಕರಣೆಗಳಿಲ್ಲ. ರಾತ್ರಿ ಹಗಲೆನ್ನದೇ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಹೆಚ್ಚಿನ ರಕ್ಷಣೆ ಬೇಕಾಗಿದೆ ಎಂದರು.
ಸ್ವಯಂಕೃತ ಅಪರಾಧದಿಂದ ಮನುಷ್ಯ ಮಾಡಿಕೊಂಡ ತಪ್ಪಿನಿಂದಾಗಿ ಅರಣ್ಯ ನಾಶವಾಗಿದ್ದು, ವಾತಾವರಣ ಹದಗೆಟ್ಟಿದೆ ಎಂದ ಅವರು ಅರಣ್ಯ ತನ್ನಷ್ಟಕ್ಕೆ ತಾನೇ ಬೆಳೆಯುತ್ತಿರುತ್ತದೆ. ಅದಕ್ಕೆ ಮನುಷ್ಯನ ಸಂಪರ್ಕವೇ ಬೇಕಾಗುವದಿಲ್ಲ. ನನ್ನನ್ನು ನನ್ನಷ್ಟಕ್ಕೆ ಬಿಟ್ಟು ಬಿಡಿ ಎಂದು ಅಂಗಲಾಚುತ್ತದೆ. ದೇಶ, ಗಡಿಭಾಗ, ಸೀಮೆಗಳು ಇವೆಲ್ಲ ಮನವ ನಿರ್ಮಿತ. ಆದರೆ ಅರಣ್ಯ ದೇವದತ್ತವಾಗಿ ಬಂದಿದ್ದು, ಇದನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಜುನಾಥ ಸುಳ್ಳೊಳ್ಳಿ ಮಾತನಾಡಿ ಕಳೆದ 30 ವರ್ಷಗಳಿಂದ ಕಾಡು, ಅರಣ್ಯಗಳ ಅನಿವಾನಭಾವ ಹೊಂದಿದ ನಾನು ಅರಣ್ಯ ರಕ್ಷಕ ಪಡುವ ಕಷ್ಟ ಅಷ್ಟಿಷ್ಟಲ್ಲ. ಅರಣ್ಯ ರಕ್ಷಣೆಗೆ ಕೇವಲ ಇಲಾಖೆ ಸಿಬ್ಬಂದಿ ಅಲ್ಲ. ಅವರನ್ನು ಹೊರತುಪಡಿಸಿ ಸಾರ್ವಜನಿಕರು ಅರಣ್ಯ ರಕ್ಷಣೆಗೆ ಮುಂದಾಗಬೇಕು. ಈ ಭಾಗದ ಡಾ.ಎಂ.ಆರ್.ದೇಸಾಯಿ ಅವರಿಗಿರುವ ಅರಣ್ಯ ಅಭಿಮಾನದಂತೆ ಅವರಿಗಿರುವ ಗೌರವ ವನ್ಯಜೀವಿ ಪರಿಪಾಲಕ ಎಂದರು.
ಇದೇ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಬಸವರಾಜ ಅರಶಿಣಗಿ ಅರಣ್ಯ ಹುತಾತ್ಮರ ದಿನಾಚರಣೆಯ ಪಕ್ಷಿನೋಟ ಹಾಗೂ ಕಳೆದ 55 ವರ್ಷಗಳಲ್ಲಿ ಕರ್ತವ್ಯ ನಿರತರಾಗಿದ್ದಾಗ ಹುತಾತ್ಮರಾದವರ ಹೆಸರುಗಳನ್ನು ಸ್ಮರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಅಧಿಕಾರಿಗಳಾದ ಚಂದ್ರಶೇಖರ ಪಾಟೀಲ, ಎ.ಎಸ್.ನೇಗಿನಾಳ, ರೂಪಾ ವಿ.ಕೆ, ವಲಯ ಅರಣ್ಯಾಧಿಕಾರಿಗಳಾದ ಬಸವರಾಜ ಬೆನಕಟ್ಟಿ, ಹಣಮಂತ, ವಿಠಲ ಹಡ್ಲಗೇರಿ, ಎಸ್.ಡಿ.ಬಬಲಾದಿ, ಅರಣ್ಯ ರಕ್ಷಕ ವರ್ಷ, ಜಿ.ಆರ್.ಬಿಲ್‍ಕೇರಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.