ಚನ್ನಪಟ್ಟಣ: ಡಿಸಿಎಂ ಡಿಕೆ ಶಿವಕುಮಾರ್ ಅವರು ಡಿಕೆ ಸುರೇಶ್ ಪರ ಪ್ರಚಾರ ಮಾಡುವುದು ನಮಗೆ ಒಳ್ಳೆಯದೇ ಆಗುತ್ತಿದ್ದು, ಅವರ ನಡವಳಿಕೆ, ನೆಗೆಟಿವಿಟಿ ನಮಗೆ ಸಪೋರ್ಟ್ ಮಾಡುತ್ತವೆ ಎಂದು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ತಿಳಿಸಿದರು.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಮಂತ್ರಿ ಆದ್ರೂ ಅವರು ಜಿಲ್ಲೆಯ ಬಗ್ಗೆ ಅಸಡೆ ತೋರಿಸುತ್ತಿದ್ದು, ಜನರು ಕೂಡ ಅವರ ವಿರುದ್ಧವಾಗಿದ್ದಾರೆ. ಡಿಕೆ ಶಿವಕುಮಾರ್ ಅವರ ಪ್ರಚಾರ ಅವರಿಗೆ ನೆಗೆಟಿವ್ ಪ್ರಚಾರ, ನಮಗೆ ಪಾಸಿಟಿವ್ ಪ್ರಚಾರ ಆಗುತ್ತದೆ ಎಂದು ಹೇಳಿದರು.
ಡಿಕೆ ಸುರೇಶ್ ದೇಶ ಇಬ್ಬಾಗ ಮಾಡುವ ರಾಷ್ಟ್ರ ವಿರೋಧ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮೈತ್ರಿ ಅಭ್ಯರ್ಥಿ ಪರ ಅಮಿತ್ ಶಾ ಪ್ರಚಾರಕ್ಕೆ ಇಳಿಯುತ್ತಿದ್ದಾರೆ. ಜೆಡಿಎಸ್ – ಬಿಜೆಪಿ ವಿರೋಧವಾಗಿದ್ದವು. ಆದ್ರೆ ಈಗ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಅತಿ ಹೆಚ್ಚಿನ ಮತಗಳು ಚನ್ನಪಟ್ಟಣ ಕ್ಷೇತ್ರದಿಂದ ಬರುತ್ತದೆ. ಈಗಾಗಿ ಇಲ್ಲಿ ರೋಡ್ ಶೋ ಮಾಡುತ್ತಿದ್ದಾರೆ. ಇದು 8 ಕ್ಷೇತ್ರಗಳ ಮೇಲೂ ಪ್ರಭಾವ ಬೀರುತ್ತದೆ ಎಂದು ಹೇಳಿದರು.
ಎರಡು ಸಲ ಡಿಕೆ ಸುರೇಶ್ ಪರ ಇದ್ದ ಯೋಗೇಶ್ವರ್ ಈಗ ಎದುರಾಳಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೈತ್ರಿಯಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಎರಡೂ ಪಕ್ಷಗಳು ಕಾಂಗ್ರೆಸ್‌ಗೆ ವಿರುದ್ಧವಾಗಿದ್ದೇವೆ. ಈಗಾಗಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿ ಗೆಲ್ಲಿಸುತ್ತೇವೆ ಎಂದ ಅವರು, ಚನ್ನಪಟ್ಟಣ ಕ್ಷೇತ್ರದಿಂದ ಯೋಗೇಶ್ವರ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೈತ್ರಿ ಧರ್ಮ ಪಾಲನೆ ಮಾಡಬೇಕಾಗುತ್ತದೆ. ಇಬ್ಬರು ವರಿಷ್ಠರು ಆ ಸಂದರ್ಭದಲ್ಲಿ ಏನು ತೀರ್ಮಾನ ಮಾಡ್ತಾರೋ ಅದಕ್ಕೆ ನಾವು ತಲೆಬಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಎನ್‌ಡಿಎ ಅಭ್ಯರ್ಥಿಯಾಗಿ ಡಾ ಸಿಎನ್ ಮಂಜುನಾಥ್ ಸ್ಪರ್ಧೆ ಮಾಡಿದ್ದಾರೆ. ಹೃದ್ರೋಗ ತಜ್ಞರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಸೇವೆಯನ್ನ ಜನರು ಮೆಲುಕು ಹಾಕುತ್ತಿದ್ದಾರೆ. ಡಿಕೆ ಸುರೇಶ್ ಮೂರು ಬಾರಿ ಸಂಸದರಾಗಿದ್ರೂ ಕೂಡ ಅವರ ನಡವಳಿಕೆ ಸರಿ ಇಲ್ಲ. ಅವರ ವಿರುದ್ಧವಾದ ಅಲೆ ಇದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ 8 ಕ್ಷೇತ್ರದಲ್ಲೂ ಕೂಡ ಮಂಜುನಾಥ್ ಪರ ಜನರಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೈವೋಲ್ಟೇಜ್ ಆಗಿದೆ ಎಂದರು.