ಬೆಂಗಳೂರು: ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮೂಲಗಳಿಂದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮಾಹಿತಿ ದೊರಕಿದೆ ಎಂದು ನಿಖಿಲ್ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದರು.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಕುಮಾರಣ್ಣ ಅವರಿಗೆ ಪೋನ್ ಟ್ಯಾಪಿಂಗ್ ವಿಚಾರದಲ್ಲಿ ಮೂಲಗಳಿಂದ ಮಾಹಿತಿಯಿದೆ ಅಂದುಕೊಳ್ಳುತ್ತೇನೆ. ಅವರಿಗೆ ಬಂದ ಮಾಹಿತಿಯ ಆಧಾರದಲ್ಲೇ ಅವರು ಮಾತನಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಯಾರ ಫೋನ್ ಟ್ಯಾಪಿಂಗ್ ಅನ್ನೂ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ನಿಖಿಲ್ ಕುಮಾರಸ್ವಾಮಿ ಅವರಿಂದ ಈ ಪ್ರತಿಕ್ರಿಯೆ ಬಂದಿದ್ದು,ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ರಚನೆ ಆದ ಮೇಲೆ ಪಾರದರ್ಶಕ ತನಿಖೆ ನಡೆಯುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಮತ್ತೆ ಪತ್ರ ಬರೆದ ವಿಚಾರವಾಗಿ ಮಾತನಾಡಿ, ಜೆಪಿ ಭವನದಲ್ಲಿ ಕುಮಾರಣ್ಣ ಅವ್ರು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನೇರವಾಗಿ ದಯಮಾಡಿ ಬಂದು ಎಸ್ ಐ ಟಿ ತನಿಖೆ ಎದುರಿಸಿ ಎಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲಾ ಕಾಯ್ತಿದ್ದಿವಿ. ನಮ್ಮ ಅಭಿಪ್ರಾಯವೂ ಇದೇ ಆಗಿದೆ. ಓರ್ವ ಪ್ರಜೆಯಾಗಿ ಹಾಸನ ಸಂಸದರು ಶೀಘ್ರವಾಗಿ ಬರಲಿ ಅನ್ನೊದು ನಮ್ಮ ಆಶಯ ಎಂದರು.