This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsState News

ಬಾಲ್ಯ ವಿವಾಹ ಪ್ರಕರಣ ದಾಖಲಿಸುವಲ್ಲಿ ವಿಳಂಬ ಸಲ್ಲದು

ಬಾಲ್ಯ ವಿವಾಹ ಪ್ರಕರಣ ದಾಖಲಿಸುವಲ್ಲಿ ವಿಳಂಬ ಸಲ್ಲದು

ಬಾಗಲಕೋಟೆ

ಬಾಲ್ಯವಿವಾಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಇದ್ದರು, ವಿಳಂಬ ದೋರಣೆ ಅನುಸರಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬಾಲನ್ಯಾಯ ಕಾಯ್ದೆ-2015 ಅಡಿ ಬರುವ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ, ಜಿಲ್ಲಾ ತನಿಖಾ ಸಮಿತಿ, ಮಕ್ಕಳ ಸಹಾಯವಾಣಿ ಸಲಹಾ ಮಂಡಳಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕರು ಇದ್ದು, ಮಗು 9 ತಿಂಗಳು ಗರ್ಭಿಣಿಯಾಗುವವರೆಗೆ ಏಕೆ ಪ್ರಕರಣ ಗೊತ್ತಾಗುವುದಿಲ್ಲ ಎಂದು ಪ್ರಶ್ನಿಸಿದರು.

ಇಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ವಲಯ ಮೇಲ್ವಿಚಾರಕಿಯರು ಮಾಹಿತಿ ನೀಡದಿದ್ದರೆ, ನೋಟಿಸ್ ನೀಡುವಂತೆ ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚಿಸಿದರು. ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳಲ್ಲಿ ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾತ್ರ ಜವಾಬ್ದಾರಿ ಅಲ್ಲ. ಎಲ್ಲ ಇಲಾಖೆಯವರು ಹೊಣೆಗಾರರು. ಎಲ್ಲರೂ ಕಾರ್ಯಪ್ರವೃತ್ತರಾಗಿ ಮಕ್ಕಳ ರಕ್ಷಣೆಯಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಇಲ್ಲದಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.

ಜಿ.ಪಂ ಸಿಇಓ ಶಶೀಧರ ಕುರೇರ್ ಮಾತನಾಡಿ ಬಾಲ್ಯವಿವಾಹ ನಿಷೇದ ಕಾಯ್ದೆ ಕುರಿತು ತರಬೇತಿ ಹಾಗೂ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಈಗಾಗಲೇ ವಿಳಂಬವಾಗಿದ್ದು, ಕೇಂದ್ರ ಕಚೇರಿಯ ಮಾದರಿ ನಮೂನೆಯಲ್ಲಿ ತಿಳಿಸಿರುವಂತೆ ಅರಿವು ಕಾರ್ಯಕ್ರಮಗಳನ್ನು ಕೂಡಲೇ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮುರಾರ್ಜಿ ದೇಸಾಯಿ ವಸತಿ ನಿಲಯಗಳ ಸಹಯೋಗದೊಂದಿಗೆ ಹಾಸ್ಟೆಲ್ ವಾರ್ಡನ್‍ಗಳಿಗೆ ಹಮ್ಮಿಕೊಳ್ಳಲು ಸೂಚಿಸಿದರು.

ಯಾವುದೇ ಖಾಸಗಿ ವ್ಯಕ್ತಿಗಳು ವಸತಿ ನಿಲಯಗಳಲ್ಲಿ ಒಳಗಡೆ ಬರುವಂತಿಲ್ಲ. ಹಾಗೂ ಮಹಿಳಾ ವಸತಿ ನಿಲಯಗಳಲ್ಲಿ ಮಹಿಳಾ ವಾರ್ಡನ್‍ಗಳನ್ನೇ ನೇಮಿಸಬೇಕು. ನಿಲಯಗಳಲ್ಲಿ ಸಿ.ಸಿ ಕ್ಯಾಮರಾ ಚಾಲ್ತಿಯಲ್ಲಿರಬೇಕು. ಈ ಕುರಿತು ಸುತ್ತೋಲೆ ಹೊರಡಿಸಲು ಸಂಬಂಧಿಸಿದ ಇಲಾಖೆಯವರಿಗೆ ಜಿ.ಪಂ ಸಿಇಓ ಸೂಚಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಮಾತನಾಡಿ ಪೋಕ್ಸೋ ಕಾಯ್ದೆ-2012 ಹಾಗೂ ಬಾಲ್ಯವಿವಾಹ ನಿಷೇಧನ ಕಾಯ್ದೆ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿದರು.

ಅಂದಾಗ ಮಾತ್ರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವೆಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಅಮರೇಶ ಎಚ್ ಬಾಲನ್ಯಾಯ ಕಾಯ್ದೆಯಡಿ ಬರುವ ಯೋಜನೆಗಳ ಪ್ರಗತಿ ವರದಿಯನ್ನು ಸಭೆಗೆ ಮಂಡಿಸಿದರು.

ವಿಶೇಷ ಪಾಲನಾ ಯೋಜನೆಯಡಿ ಹೆಚ್.ಐ.ವ್ಹಿ ಸೋಂಕಿತ ಮತ್ತು ಬಾಧಿತ ಮಕ್ಕಳಿಗೆ ಪೌಷ್ಠಿಕ ಆಹಾರ, ವೈದ್ಯಕೀಯ ವೆಚ್ಚ ಹಾಗೂ ಇತರೆ ವೆಚ್ಚಕ್ಕಾಗಿ ಪ್ರತಿ ಮಾಹೆ 1000 ರೂ.ಗಳಂತೆ ಡಿ.ಬಿ.ಟಿ ಮೂಲಕ ಆರ್ಥಿಕ ಸಹಾಯಧನ ನೀಡಲಾಗುತ್ತದೆ. ಪ್ರಸಕ್ತ ಸಾಲಿನ ಮೂರನೇ ತ್ರೈಮಾಸಿಕದಲ್ಲಿ 515 ಮಕ್ಕಳು ಆರ್ಥಿಕ ಸೌಲಭ್ಯ ಪಡೆಯಲು ಅರ್ಹರಿದ್ದಾರೆಂದು ತಿಳಿಸಿದರು.

ಪ್ರಾಯೋಜಕತ್ವ ಯೋಜನೆಯಡಿ ಮಕ್ಕಳ ಪಾಲನಾ ಸಂಸ್ಥೆಗಳಿಂದ ಬಿಡುಗಡೆಯಾದ ಮಕ್ಕಳು, ಅನಾಥ, ಏಕ ಪೋಷಕ, ಜೈಲಿನಲ್ಲಿರುವ ಪಾಲಕರ ಮಕ್ಕಳಿಗೆ ಹಾಗೂ ಇತರೆ ಮಕ್ಕಳಿಗೆ ಕುಟುಂಬದ ವಾತಾವರಣದಲ್ಲಿ ಬೆಳೆಯಲು ಹಾಗೂ ವಿದ್ಯಾಭ್ಯಾಸ ಮುಂದುವರೆಸಲು ಪ್ರತಿ ಮಾಹೆ 4 ಸಾವಿರ ರೂ.ಳಂತೆ ಡಿ.ಬಿ.ಟಿ ಮೂಲಕ 209 ಮಕ್ಕಳಿಗೆ ಆರ್ಥಿಕ ಸಹಾಯ ಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ವಿಶೇಸ ಮಕ್ಕಳ ಪೊಲೀಸ್ ಘಟಕದ ಉಪ ಅಧೀಕ್ಷಕರು ಪಂಪನಗೌಡ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಸ್ತಗಿರಿಸಾಬ ಮುಲ್ಲಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಬಾಲನ್ಯಾಯ ಮಂಡಳಿ ಸದಸ್ಯರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸರಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಜಯಮಾಲಾ ದೊಡಮನಿ ಸೇರಿದಂತೆ ಮಕ್ಕಳ ಪಾಲನಾ ಸಂಸ್ಥೆಯ ಮುಖ್ಯಸ್ಥರು, ಮಕ್ಕಳ ಸಹಾಯವಾಣಿ ಸಂಯೋಜಕರು ಉಪಸ್ಥಿತರಿದ್ದರು.

Nimma Suddi
";