ಬೆಂಗಳೂರು: ಕಾಂಗ್ರೆಸ್ ನಲ್ಲಿ ಭಿನ್ನಮತ ಇಲ್ಲವೆಂದು ಹೇಳುವುದಿಲ್ಲ. ಆದರೆ ಸರ್ಕಾರ ಪತನವಾಗಲಿದೆ ಎಂಬುವುದು ಸುಳ್ಳು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಮಹಾರಾಷ್ಟ್ರ ಮಾದರಿಯಲ್ಲಿ ಆಪರೇಷನ್ ಕಮಲದ ಬಗ್ಗೆ ಹೇಳಿಕೆ ನೀಡಿರುವ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,ಏಕನಾಥ್ ಶಿಂಧೆ ಸ್ವತಂತ್ರ್ಯ ಇದ್ದಾರೆ. ಅವರು ಮಾತನಾಡ್ತಾರೆ. ಅವರು ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡಬಹುದು. ನಮ್ಮ ಕಾಂಗ್ರೆಸ್ ಜೊತೆ ಚರ್ಚೆ ಮಾಡೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ 4 ವರ್ಷ ಇದ್ದೇ ಇರುತ್ತದೆ. ಭಿನ್ನಮತ ಇಲ್ಲ ಅಂತ ಹೇಳಲ್ಲ. ಆದರೆ ಸರ್ಕಾರ ಬೀಳುತ್ತೆ ಅನ್ಮೋದು ಸುಳ್ಳು. ಅವರ ಪಕ್ಷದಲ್ಲೂ ಭಿನ್ನಮತ ಇಲ್ವಾ? ವರ್ಗಾವಣೆ,ಅಭಿವೃದ್ಧಿ ವಿಚಾರದಲ್ಲಿ ಸಮಸ್ಯೆ ಇರಬಹುದು. ಅಧಿಕಾರ ಇರುವವರೆಗೆ ಸಮಸ್ಯೆ ಇರುತ್ವೆ. ನಾವು ಸಮಸ್ಯೆ ಸರಿಪಡಿಸಿಕೊಳ್ತೇವೆ ಎಂದರು.
ಗೊಂದಲ, ಭಿನ್ನಮತ ಆಗ್ತಾನೇ ಇರುತ್ತದೆ ಹಾಗೂ ಹೋಗ್ತಾನೇ ಇರುತ್ತದೆ. ಅದನ್ನೇ ಮುಂದಿಟ್ಟುಕೊಂಡು ಸರ್ಕಾರ ಬೀಳುತ್ತೆ ಅನ್ನೋದು ಸುಳ್ಳು. ಇಲ್ಲಿ ಲಾಂಗ್ ಜಂಪ್ ಜಿಗಿಯೋಕೆ ಆಗಲ್ಲ. ಮಹಾರಾಷ್ಟ್ರದ್ದು ಬೇರೆ, ಕರ್ನಾಟಕಕ್ಕೆ ಅದನ್ನು ಹೋಲಿಕೆ ಮಾಡೋಕೆ ಆಗಲ್ಲ ಎಂದರು.
ನಮ್ಮದೇನಿದ್ರೂ ಪಾರ್ಟಿ ಒಳಗೆ ಜಗಳ ಅಷ್ಟೇ ಹೊರತಾಗಿ ಪಾರ್ಟಿ ಹೊರಗೆ ನಮ್ಮ ಘರ್ಷಣೆ ಇಲ್ಲ. ಹಾಗಾಗಿ, ಸರ್ಕಾರ ಬೀಳುತ್ತದೆ ಅನ್ಮೋದು ಸುಳ್ಳು ಎಂದರು.