ವಿಜಯಪುರ:
ನರೇಂದ್ರ ಮೋದಿ ಭಾರತವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಹೀಗಾಗಿ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಲೋಕಸಭೆ ಚುನಾವಣೆ ಬಳಿಕ ಅಥವಾ ಮೊದಲು ಅಚ್ಚರಿಯ ಬೆಳವಣಿಗೆ ನಡೆಯಲಿದ್ದುಘಿ, ಅದು ಕಾಂಗ್ರೆಸ್‌ಗೆ ಭಯ ತರಿಸಿದೆ. ಹೀಗಾಗಿ ಕಾಂಗ್ರೆಸ್ಸಿಗರೇ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ರಾಜಕಾರಣಿಗಳು ತಮ್ಮಷ್ಟಕ್ಕೇ ತಾವೇ ಏನಾದರೊಂದು ಸುಳ್ಳು ಸುದ್ದಿ ಹರಿಬಿಡುತ್ತಾರೆ. ಕಾಂಗ್ರೆಸ್‌ಗೆ ತನ್ನ ಶಾಸಕರ ಮೇಲೇ ವಿಶ್ವಾಸವಿಲ್ಲ. ಬಿಜೆಪಿಯವರು ಬಂದರಷ್ಟೇ ಗೆಲ್ಲುತ್ತೇವೆಂಬ ಭಾವನೆ ಕಾಂಗ್ರೆಸ್ಸಿಗರಲ್ಲಿದೆ. ಹೀಗಾಗಿ ಆ ಪಕ್ಷದವರೇ ಗೊಂದಲ ಸೃಷ್ಟಿಸುತ್ತಾರೆಂದು ತಿರುಗೇಟು ನೀಡಿದರು.
ಬಿಜೆಪಿಯ ಕೆಲವರು ಬಿಟ್ಟು ಹೋಗ್ತಾರೆ ಅನ್ನೋದು ಕಾಂಗ್ರೆಸ್ ಸೃಷ್ಟಿ . ಬಿಜೆಪಿಯಲ್ಲಿ ಎಂಎಲ್‌ಎ ಮಂತ್ರಿಗಳಾಗಿ ಸಾಕಷ್ಟು ಅನುಭವಿಸಿದ್ದಾರೆ. ಮುನೇನಕೊಪ್ಪ ಅವರೊಟ್ಟಿಗೆ ನಾನು ಮಾತನಾಡಿದ್ದೇನೆ. ಅವರು ಕಾಂಗ್ರೆಸ್‌ಗೆ ಹೋಗದೆ ಬಿಜೆಪಿಯಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಯತ್ನಾಳ ತಿಳಿಸಿದರು.
ಕೇಂದ್ರದಲ್ಲಿ ಮತ್ತೆ ಬಿಜೆಪಿ: ಸಮೀಕ್ಷೆ ಪ್ರಕಾರ ನರೇಂದ್ರ ಮೋದಿ ಅವರು 3ನೇ ಅವಧಿಗೆ ಪ್ರಧಾನಿ ಆಗ್ತಾರೆ. ಬಿಜೆಪಿ ಕನಿಷ್ಠ 300 ಸೀಟ್ ಗೆಲ್ಲುವ ವಾತಾವರಣವಿದೆ. ಹೀಗಾಗಿ ಕಾಂಗ್ರೆಸ್ ಹತಾಶೆಗೊಂಡು ಗಾಳಿ ಸುದ್ದಿ ಹಬ್ಬಿಸುತ್ತಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ತಿರುಗೇಟು ನೀಡಿದರು.
ಈ ವರೆಗೆ ಯಾರಾದರೂ ಕಾಂಗ್ರೆಸ್ ಸೇರಿದ್ದಾರೆಯೇ? ಅಭಿವೃದ್ಧಿ ದೃಷ್ಟಿಯಿಂದ ಶಾಸಕರು ಸಿಎಂ ಭೇಟಿ ಮಾಡ್ತಾರೆ. ಅಭಿವೃದ್ಧಿ ಸಲುವಾಗಿ ನಾನೇನಾದರೂ ಸಿಎಂ ಭೇಟಿಯಾದರೆ ನಾನು ಕೂಡ ಕಾಂಗ್ರೆಸ್ ಸೇರುತ್ತೇನೆಂಬ ಅರ್ಥವೇ? ಎಂದು ಯತ್ನಾಳ ಪ್ರಶ್ನಿಸಿದರು.