ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಹುದ್ದೆಯ ಘನತೆ ಮರೆತು ಧರ್ಮದ ಆಧಾರದ ಮೇಲೆ ಕೀಳು ಹೇಳಿಕೆ ನೀಡಿರುವುದು ದುರದೃಷ್ಟಕರ. ಹಿಂದೆ ಯಾವೊಬ್ಬ ಪ್ರಧಾನಿಯೂ ಈ ಮಟ್ಟಕ್ಕೆ ಇಳಿದು ಮಾತನಾಡಿರಲಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಇಲ್ಲಿಯವರೆಗೆ ಚುನಾವಣೆಯಲ್ಲಿ ಈ ಮಟ್ಟಕ್ಕೆ ಪರಸ್ಪರ ದ್ವೇಷ ಮಾಡುವುದನ್ನು ನೋಡಿರಲಿಲ್ಲ. ದೇಶದಲ್ಲಿ ಶಾಂತಿ ಕಾಪಾಡಬೇಕಿರುವುದು ಪ್ರಧಾನಿಗಳ ಹೊಣೆ. ಅಂತಹ ಪ್ರಧಾನಮಂತ್ರಿಗಳೇ ಧರ್ಮದ ಆಧಾರದ ಮೇಲೆ ಮಾತನಾಡುತ್ತಿದ್ದಾರೆ. ಪ್ರಧಾನಮಂತ್ರಿಗಳು ಮತಕ್ಕಾಗಿ ದ್ವೇಷದ ಭಾಷಣ ಮಾಡುವುದು ಸರಿಯಲ್ಲ. ಜನರು ಇದನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಯಾರ ಬೆನ್ನಿಗೂ ಚೂರಿ ಹಾಕಿಲ್ಲ. ಆ ಸಂಪ್ರದಾಯವೂ ನಮ್ಮಲ್ಲಿಲ್ಲ. ನಮ್ಮ ಜೊತೆ ಮೈತ್ರಿ ಮಾಡಿಕೊಂಡ ಪಕ್ಷದವರನ್ನು ಗೌರವಯುತವಾಗಿ ನಡೆಸಿಕೊಂಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವೇಳೆ ಮಾರ್ಗಮಧ್ಯೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ದೇವೇಗೌಡರನ್ನು ಪ್ರಧಾನಿ ಮಾಡಿದೆವು. ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಯುಪಿಎ ಸರ್ಕಾರ ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಎಲ್ಲಾ ಮಿತ್ರಪಕ್ಷಗಳನ್ನೂ ವಿಶ್ವಾಸದಿಂದ ಕಂಡಿದ್ದೇವೆ ಎಂದರು.
ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ನಾವೆಂದಿಗೂ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದರು. ಬಿಜೆಪಿಯವರು ಯಾವ ನೈತಿಕತೆ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತಿದ್ದಾರೆ. ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಿದ್ದ ತೆರಿಗೆ ಹಣವನ್ನು ನೀಡಿಲ್ಲ. ಜಿಎಸ್‌ಟಿ ಪಾಲನ್ನೂ ಕೊಡುತ್ತಿಲ್ಲ. ಬರಪರಿಹಾರಕ್ಕೆ ನಯಾಪೈಸೆಯನ್ನೂ ಇಲ್ಲಿವರೆಗೆ ಕೊಟ್ಟಿಲ್ಲ. ಇವರಿಗೆ ಜನರು ಮತ ಏಕೆ ಕೊಡಬೇಕು. ನಾವು ಜನಪರವಾದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಮತ ಕೇಳುವ ನೈತಿಕತೆ ಕಾಂಗ್ರೆಸ್‌ಗೆ ಮಾತ್ರ ಇದೆ ಎಂದು ಹೇಳಿದರು.
ನೇಹಾ ಹಿರೇಮಠ ಕೊಲೆ ವಿಚಾರವನ್ನು ಕೆಲವರು ಚುನಾವಣಾ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ನೇಹಾಗಾಗಿ ಮತ ಹಾಕಿ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಕೊಲೆ ಮಾಡಿದವನು ಮುಸ್ಲಿಂ ಆಗಿರುವುದಕ್ಕೆ ಕಾಂಗ್ರೆಸ್ ಅವರ ಪರ ಇದೆ ಎನ್ನುತ್ತಿದ್ದಾರೆ. ನನ್ನ ಹಾಗೂ ಮುಖ್ಯಮಂತ್ರಿಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಾವು ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಅವನ ಮೇಲೆ ಎಷ್ಟು ಕಠಿಣ ಕ್ರಮ ಕೈಗೊಳ್ಳಬೇಕೋ ಕಾನೂನು ಪ್ರಕಾರ ಕೈಗೊಳ್ಳುತ್ತೇವೆ ಎಂದು ವಿವರಿಸಿದರು.