ಶಿವಮೊಗ್ಗ: ಪ್ರಜ್ವಲ್ ರೇವಣ್ಣ ಅಷ್ಟೇ ಅಲ್ಲ. ರಾಜ್ಯದಲ್ಲಿ ಇನ್ನೂ ತುಂಬ ಜನರದ್ದು ವಿಡಿಯೋಗಳಿವೆ. ಅವುಗಳು ಬರುವವರು ದಿನಗಳಲ್ಲಿ ಹೊರಬರಲಿವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹೇಳಿಕೆ ನೀಡಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,‘ಸಂಘ ಕುಛ್ ನಹಿ ಕರೇಗಾ ಸ್ವಯಂ ಸೇವಕ ಸಬ್‌ಕುಛ್ ಕರೇಗಾ’ ಎಂದು ಆರ್‌ಎಸ್‌ಎಸ್ ಪ್ರಮುಖರೊಬ್ಬರು ಹೇಳಿದ್ದರು. ಅದರಂತೆ ನಾನೂ ನಡೆದುಕೊಳ್ಳುತ್ತಿದ್ದೇನೆ ಎಂದರು.
ಹಿಂದು ಸಮಾಜ ನನ್ನ ಹಿಂದೆ ಬರಲಿದೆ. ಜಾತಿವಾದಿಗಳನ್ನು ಈ ಚುನಾವಣೆಯನ್ನು ಮತದಾರರು ತಿರಸ್ಕರಿಸುತ್ತಾರೆ. ಲಿಂಗಾಯತರು, ಒಕ್ಕಲಿಗರು, ಕುರುಬರು ಎಲ್ಲರೂ ಹಿಂದುತ್ವವಾದಿಗಳೆ. ಅವರನ್ನು ಆಯಾ ರಾಜಕಾರಣಿಗಳು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎನ್ನುವುದಾದರೆ, ಯಡಿಯೂರಪ್ಪ ಅವರು ಹುಚ್ಚರಾಯಸ್ವಾಮಿ ಮೇಲೆ ಆಣೆ ಮಾಡಲಿ. ಈ ಒಳ ಹೊಂದಾಣಿಕೆಗಳಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ವಿಫಲವಾಗುತ್ತವೆ ” ಎಂದರು.
ಯಡಿಯೂರಪ್ಪ ಅವರಿಗೆ ರಾಜಕೀಯ ಭವಿಷ್ಯ ಬೇಕೆನ್ನುವುದಾದರೆ, ಬಹಿರಂಗ ಮತ್ತು ಆಂತರಿಕ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಬಿಡಬೇಕು. ಹಿಂದುತ್ವಕ್ಕಾಗಿ ನಾನು ಹೋರಾಡುತ್ತಿರುವುದರಿಂದ ಸಂಘ ಪರಿವಾರದವರು ನನ್ನೊಂದಿಗದ್ದಾರೆ. ಸಂಘಕ್ಕೂ ಸಹ ಸಮಾಧಾನ ಇದೆ ಎಂದು ಭಾವಿಸುತ್ತೇನೆ ಎಂದು ಸೂಚಿಸಿದರು.