ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿಕೆ
ವಿಜಯಪುರ
ಡಿ.ಕೆ. ಶಿವಕುಮಾರ ಸಿಎಂ ಆಗಬೇಕೆಂದು ನೊಣವಿನಕೆರೆ ಸ್ವಾಮೀಜಿ ಹೇಳಿಕೆ ಅಪ್ರಸ್ತುತ. ಈಗಂತೂ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ ಎಂದು ಬೃಹತ್ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ ಸ್ಪಷ್ಟಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆಗುವುದು ನಮ್ಮ ಪಕ್ಷದ ವರಿಷ್ಠರ ಕೈಯ್ಯಲ್ಲಿರುತ್ತದೆ. ಇದಕ್ಕೆಂದೇ ಕಾಂಗ್ರೆಸ್ ಹೈಕಮಾಂಡ್ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇದ್ದಾರೆ. ಅವರೆಲ್ಲ ವೀಕ್ಷಣೆ ಮಾಡಿ ಶಾಸಕರ ಅಭಿಪ್ರಾಯ ಪಡೆದು ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂದು ನಿರ್ಧಾರ ಮಾಡುತ್ತಾರೆ. ಹೀಗಾಗಿ ಈ ಪ್ರಶ್ನೆ ಈಗ ಸದ್ಯಕ್ಕೆ ಉದ್ಭವಿಸುವುದಿಲ್ಲ. ಮೇಲಾಗಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ ಎಂದರು.
ಹಿರಿಯ ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಸಿಎಂ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ, ಏನೇ ಅಸಮಾಧಾನ ಇದ್ದರೂ, ನಮ್ಮ ಪಕ್ಷದ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡುತ್ತೇವೆ ಎಂದರು.
ಹರಿಪ್ರಸಾದ್ ನಮ್ಮ ಪಕ್ಷದ ಹಿರಿಯ ನಾಯಕರು. ಅವರು ಯಾವ ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಅವರೊಬ್ಬ ಹಿರಿಯ ಹಾಗೂ ಕಟ್ಟರ್ ಕಾಂಗ್ರೆಸ್ ಮುಖಂಡರು. ಅವರ ಬದ್ಧತೆಯನ್ನು ನಾವ್ಯಾರೂ ಪ್ರಶ್ನೆ ಮಾಡಲ್ಲ. ಪ್ರಶ್ನೆ ಮಾಡಲೂ ಸಹ ಅಗಲ್ಲ ಎಂದರು.
ಅನೇಕ ಸಂದರ್ಭಗಳಲ್ಲಿ ಅವರು ಸೂಚನೆಗಳನ್ನು ಕೊಟ್ಟಿರುತ್ತಾರೆ. ಎಲ್ಲ ಸಮುದಾಯಗಳಿಗೂ ಅನುದಾನ ಕೊಡಿ ಎಂದು ಹೇಳಿರುತ್ತಾರೆ. ಅವರು ಓರ್ವ ಹಿಂದುಳಿದ ವರ್ಗದ ನಾಯಕರು.
ಎಲ್ಲರ ನೋವುಗಳನ್ನ ಅರ್ಥ ಮಾಡಿಕೊಂಡವರು. ಹಾಗಾಗಿ ಎಲ್ಲರಿಗೂ ಅನುದಾನ ಕೊಡಿ ಎಂದು ಹೇಳಿರಬಹುದು. ಅದರಲ್ಲೇನು ತಪ್ಪು ಎಂದು ಸಚಿವ ಎಂ.ಬಿ. ಪಾಟೀಲ ಉತ್ತರಿಸಿದರು.
ಎನ್‌ಐಎ ತನಿಖೆಗೆ ಒತ್ತಾಯ :
ತನ್ವೀರ ಪೀರಾ ಅವರು ಐಸಿಎಸ್ ಉಗ್ರರೊಂದಿಗೆ ನಂಟು ಹೊಂದಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಕೇಂದ್ರ ಸರಕಾರ ಅವರ ವಿರುದ್ಧ ಎನ್‌ಐಎ ತನಿಖೆ ನಡೆಸಲಿ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಈಗಾಗಲೇ ತನ್ವೀರಾ ಪೀರಾ ಹೇಳಿದ್ದಾರೆ. ಹಾಗಾಗಿ ಕೇಂದ್ರ ಸರಕಾರ ಎನ್‌ಐಎ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಗಡೆ ಬರುತ್ತದೆ ಎಂದರು. ಆದರೆ ತನಿಖೆಯಲ್ಲಿ ಸುಳ್ಳು ಎಂಥಾದರೆ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಏನು ಮಾಡುತ್ತಾರೆ ಎನ್ನುವುದು ನಮ್ಮ ಪ್ರಶ್ನೆ ಎಂದು ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದರು.
ಯತ್ನಾಳ ಅವರು ಮುಸ್ಲಿಂರನ್ನು ದ್ವೇಷಿಸುತ್ತಲೇ ಬಂದಿದ್ದಾರೆ. ಆದರೆ ಜೆಡಿಎಸ್‌ನಲ್ಲಿದ್ದಾಗ ಮುಸ್ಲಿಂರನ್ನು ಓಲೈಸುವ ಕೆಲಸ ಮಾಡಿದ್ದಾರೆ. ಅಂದು ಮುಸ್ಲಿಂರ ಮತಗಳು ಅವರಿಗೆ ಬೇಕಾಗಿದ್ದವು. ಆಮೇಲೆ ಬಿಜೆಪಿಗೆ ಮರಳಿದ ಮೇಲೆ ಹಿಂದೂತ್ವ, ಹಿಂದೂ ಹುಲಿ ಎಂದು ಬಿರುದು ಇಟ್ಟುಕೊಂಡಿದ್ದಾರೆ ಎಂದರು.