ಬಾಗಲಕೋಟೆ:
ಬಡವರು ಮತ್ತು ಅಸಹಾಯಕರಿಗೆ ನ್ಯಾಯ ದೊರಕಿಸಿಕೊಡುವುದೇ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಧ್ಯೇಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ ವಿಜಯ ಹೇಳಿದರು.
ಜಿಲ್ಲಾ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರದಂದು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ, ರಾಷ್ಟಿçÃಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಿ ಎಲ್ ಎಸ್ ಎ ಮುಖ್ಯ ಉದ್ದೇಶವೇ ವಕೀಲರ ಶುಲ್ಕವನ್ನು ನೀಡಲು ಅಸಹಾಯಕರಾದಂತಹ ಮಹಿಳೆ, ಮಕ್ಕಳು, ವೃದ್ದರು, ಆರ್ಥಿಕವಾಗಿ ದುರ್ಬಲರಾಗಿರುವಂತವರಿಗೆ ಕಾನೂನಿನ ನೆರವು ನೀಡುವುದಾಗಿದೆ. ಎಲ್ಲರಿಗೂ ಕಾನೂನಿನ ಅರಿವು ಇರುವುದಿಲ್ಲ ಆದ್ದರಿಂದ ಕಾನೂನು ಸೇವಾ ಪ್ರಾಧಿಕಾರವು ಅನೇಕ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ. ಎ. ಮೂಲಿಮನಿ ಮಾತನಾಡಿ, ವ್ಯಕ್ತಿಯ ವಾರ್ಷಿಕ ಆದಾಯ ಮೂರು ಲಕ್ಷ ಕ್ಕಿಂತ ಕಡಿಮೆ ಇರುವ ಎಲ್ಲಾ ವರ್ಗದ ಜನರು ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆಯನ್ನು ಪಡೆಯಬಹುದಾಗಿರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಮಾನಸಿಕ ಅಥವಾ ಬೇರೆ ಯಾವುದೇ ನ್ಯೂನ್ಯತೆ ಹೊಂದಿರುವ ಮಹಿಳೆ, ಮಕ್ಕಳು, ಕಾರ್ಖಾನೆಯ ಕಾರ್ಮಿಕರು, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕ ವಿನಾಶಕ್ಕೆ ತುತ್ತಾದವರು ಹಾಗೂ ಮತೀಯ ಕಾರಣಕ್ಕೆ ದೌರ್ಜನ್ಯಕ್ಕೆ ಬಲಿಯಾದವರು ತಮ್ಮ ಸಮೀಪದ ನ್ಯಾಯಾಲಯ ಆವರಣದಲ್ಲಿರುವ ತಾಲೂಕು ಸೇವಾ ಸಮಿತಿ ಅಥವಾ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದರು.
ಕುಟುಂಬ ನ್ಯಾಯಾಲಯದ ಮುಖ್ಯ ಪ್ರಧಾನ ನ್ಯಾಯಾಧೀಶ ಕೃಷ್ಣಮೂರ್ತಿ ಆರ್ ಪಡಸಲಗಿ ಮಾತನಾಡಿ, ಜನಸಾಮಾನ್ಯರಿಗೆ ಕಾನೂನು ಬಗ್ಗೆ ಅರಿವನ್ನುಂಟು ಮಾಡಿ ಉಚಿತ ಕಾನೂನು ನೆರವು ಸಲಹೆಯನ್ನು ನೀಡುವುದು ಹಾಗೂ ಲೋಕ್ ಅದಾಲತ್ ಮೂಲಕ ನ್ಯಾಯಾಲಯಗಳಲ್ಲಿ ಅಥವಾ ಇತರೆ ಕಛೇರಿಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವುದು, ಎಲ್ಲಾ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಸ್ವಾಗತಿಸಿದರು. ನ್ಯಾಯವಾದಿ ಪ್ರವೀಣ ಕಮ್ಮಾರ ವಂದನಾರ್ಪಣೆ ಮಾಡಿದರು. ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಎಸ್.ಬಿ ರೆಹಮಾನ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಪಲ್ಲವಿ ಆರ್, ೧ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶಿ ಹೇಮಾ ಪಸ್ತಾಪೂರ, ಜೆ.ಎಮ್.ಎಫ್.ಸಿ ಪ್ರಧಾನ ದಿವಾಣಿ ನ್ಯಾಯಾಧೀಶ ಮುರಗೇಂದ್ರ ತುಬಾಕೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ ಪೂಜಾರ ಹಾಗೂ ಕಾರ್ಯದರ್ಶಿ ಶ್ರೀಶೈಲ ಹಾವರಗಿ ಉಪಸ್ಥಿತರಿದ್ದರು.