ಅರಮನೆ ಮೈದಾನದಲ್ಲಿ ಕಾರ್ಯಕ್ರಮ / 15 ಸಾವಿರ ಜನ ಭಾಗವಹಿಸುವ ನಿರೀಕ್ಷೆ
ಬೆಂಗಳೂರು
ಅವಕಾಶ ವಂಚಿತ ಹಿಂದುಳಿದ ಸಮುದಾಯಗಳ ಸಮಸ್ಯೆಗಳ ಪರಿಹಾರಕ್ಕೆ ಸಂಘಟಿತ ಹೋರಾಟ ರೂಪಿಸುವ ನಿಟ್ಟಿನಲ್ಲಿ ನಗರದ ಅರಮನೆ ಮೈದಾನದಲ್ಲಿ ಶನಿವಾರ (ಸೆ.9) ಹಮ್ಮಿಕೊಂಡಿರುವ ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆಯಲ್ಲಿ ಸುಮಾರು 15 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ.
ಈಡಿಗ, ಉಪ್ಪಾರ, ಬಂಜಾರ, ಯಾದವ, ಮಡಿವಾಳ, ಸವಿತಾ ಸಮಾಜ, ವಿಶ್ವಕರ್ಮ, ಮೇದಾರ, ಅಲೆಮಾರಿ, ಭಜಂತ್ರಿ ಸೇರಿದಂತೆ ಸುಮಾರು 92 ಅತಿ ಹಿಂದುಳಿದ ಸಮಾಜದ ಸ್ವಾಮೀಜಿಗಳು ಮತ್ತು ನಾಯಕರು ಭಾಗವಹಿಸಲಿದ್ದಾರೆ.
ಇಡೀ ದಿನ ಸಭೆ ನಡೆಯಲಿದ್ದು, ರಾಜ್ಯದ ಮೂಲೆಗಳಿಂದಲೂ ಸಮುದಾಯಗಳ ಜನರನ್ನು ಕರೆತರಲು ಬಸ್ ಗಳ ವ್ಯವಸ್ಥೆಮಾಡಲಾಗಿದೆ.ಈ ಸಭೆಗೆ ಬರುವ ಜನರಿಗೆ ಕುಡಿಯುವ ನೀರು, ಮಜ್ಜಿಗೆ, ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ನಿಲುಗಡೆಗೆ ಅರಮನ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಜನರು ಸಭೆ ನಡೆಯುವ ವೈಟ್ ಪೆಟಲ್ಸ್ ಸಭಾಂಗಣಕ್ಕೆ ಕಾಲ್ನಡಿಗೆಯಲ್ಲಿ ಬರಲಿದ್ದಾರೆ.
ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಸುಸಜ್ಜಿತ ಪೆಂಡಾಲ್ ಮತ್ತು ಆಸನದ ವ್ಯವಸ್ಥೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅರಮನೆ ಮೈದಾನದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವಾಹನ ಅತಿ ಸಂಚಾರ ನಿರ್ವಹಣೆಗೆ ಹೆಚ್ಚಿನ ಪೊಲೀಸರನ್ನು ರಾಜಕೀಯ ನಿಯೋಜಿಸಲಾಗಿದೆ.
ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಭೆ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಈಡಿಗ ಮಹಾಮಂಡಳಿ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಪ್ರಾಸ್ತಾವಿಕ ಭಾಷಣ ಮಾಡುತ್ತಾರೆ.
ರಾಜ್ಯದ ಅತಿ ಹಿಂದುಳಿದ ವರ್ಗಗಳ ಹಲವು ಸ್ವಾಮೀಜಿಗಳು ಸಾನ್ನಿಧ್ಯ ವಹಿಸುತ್ತಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಸಭೆಯ ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಆರ್. ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ, ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಮಾಜಿ ಸಂಸದ ರಾಮುಲು, ಆಂಧ್ರಪ್ರದೇಶದ ವಸತಿ ಸಚಿವ ಜೋಗಿ ರಮೇಶ್, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಿಂದುಳಿದ ಭಾಗವಹಿಸಲಿದ್ದಾರೆ.