ಬೆಂಗಳೂರು: ನಾನು ಒಕ್ಕಲಿಗರ ನಾಯಕನಾಗುವ ಪ್ರಯತ್ನ ಮಾಡುತ್ತಿಲ್ಲ, ಅದರೆ ಒಕ್ಕಲಿಗನಾಗಿ ಹುಟ್ಟಿದ್ದೇನೆ ಮತ್ತು ಸಮುದಾಯಕ್ಕೆ ತನ್ನಿಂದಾಗುವ ಸಹಾಯ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಒಕ್ಕಲಿಗ ನಾಯಕತ್ವ ಬಿಜೆಪಿಯ ಸೃಷ್ಟಿ, ತನಗೆ ಆ ನಾಯಕತ್ವ ಬೇಕಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ನಾಯಕನಾಗಿ ಗುರುತಿಸಿಕೊಂಡಿದ್ದೇನೆ, ಕಳೆದ 4 ವರ್ಷಗಳಿಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ ಮತ್ತು ತಾನು ಮಾಡುತ್ತಿರುವ ಕೆಲಸ ಆತ್ಮತೃಪ್ತಿ ನೀಡಿದೆ ಎಂದು ಹೇಳಿದರು
ನಿನ್ನೆ ನಗರದಲ್ಲಿ ಮಳೆಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಮಳೆಯಾಗಲಿ, ಇನ್ನಷ್ಟು ಮಳೆಯಾಗಲಿ ಅಂತ ಭಗವಂತನನ್ನು ಪ್ರಾರ್ಥಿಸುತ್ತೇನೆ, ಅದರಿಂದ ತೊಂದರೆ ಏನೂ ಇಲ್ಲ, ಎಲ್ಲರಿಗೂ ಈಗ ಮಳೆ ಬೇಕಾಗಿದೆ, ರಾಜ್ಯದ ಜನತೆಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಚೆನ್ನಾಗಿ ಮಳೆಯಾದರೆ ಈ ಬಾಬತ್ತಿನಲ್ಲಿ ದಿನವೊಂದಕ್ಕೆ ಸರ್ಕಾರಕ್ಕೆ 1,000 ಕೋಟಿ ರೂ. ಪ್ರಯೋಜನವಾಗುತ್ತದೆ ಎಂದು ಸೂಚಿಸಿದರು.