17 ರಂದು ಖಾಜಿಬೀಳಗಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ
ನಿಮ್ಮ ಸುದ್ದಿ ಬಾಗಲಕೋಟೆ
ಜಮಖಂಡಿ ತಾಲೂಕಿನ ಖಾಜಿಬೀಳಗಿ ಗ್ರಾಮದಲ್ಲಿ ಸೆಪ್ಟಂಬರ್ 17 ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಗ್ರಾಮದಲ್ಲಿರುವ ಕುಂದು ಕೊರತೆಗಳನ್ನು ಬಗೆ ಹರಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸೆಪ್ಟೆಂಬರ್ ಮಾಹೆಯ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಖಾಜಿಬೀಳಗಿ ಗ್ರಾಮದ ಸಾರ್ವಜನಿಕರಿಂದ ಈಗಾಗಲೇ 287 ಅರ್ಜಿಗಳು ಸ್ವೀಕೃತವಾಗಿರುತ್ತವೆ. ಅವುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರಿಸುವದರಿಂದ ಶೀಘ್ರದಲ್ಲಿ ಪರಿಹಾರ ನೀಡಬೇಕು ಎಂದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 151 ಅರ್ಜಿ ಸ್ವೀಕೃತವಾಗಿದ್ದು ಅವುಗಳಲ್ಲಿ 60 ಪಿಂಚಣಿಗೆ ಮತ್ತು ಪಹಣಿ ತಿದ್ದುಪಡಿಗಾಗಿ 51 ಅರ್ಜಿಗಳಿ ಬಂದಿದ್ದು, ಇವುಗಳಿಗೆ ಸಂಬಂಧಪಟ್ಟಂತೆ ದಾಖಲೆಗಳನ್ನು ಸಂಗ್ರಹಿಸಿ ಇತ್ಯರ್ಥಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. 7 ಅರ್ಜಿಗಳು ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕಕ್ಕೆ ಸಂಬಂಧಪಟ್ಟದ್ದಾಗಿದ್ದು ಹೆಸ್ಕಾಂ ಅಧಿಕಾರಿ ಇದರತ್ತ ಗಮನ ಹರಿಸಬೇಕು. ಸಾವಳಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುವದಿಲ್ಲ ಹಾಗೂ ಖಾಜಿಬೀಳಗಿ ಸಿ ಹೆಚ್ ಸಿ ಕೇಂದ್ರದ ಸಿಬ್ಬಂದಿಗಳು ನಿಯಮಿತವಾಗಿ ಬರುವದಿಲ್ಲ ಎಂಬ ದೂರಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಸಂಬಂಧಿಸಿದ ವೈಧ್ಯಾಧಿಕಾರಿಗೆ ಸೂಕ್ತ ಕ್ರಮ ಜರುಗಿಸಿ ಸಮಸ್ಯೆ ನಿವಾರಿಸಬೇಕು ಎಂದು ಹೇಳಿದರು.
ಒಟ್ಟಾರೆಯಾಗಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಯಾವುದೇ ಲೋಪದೋಷಗಳಾಗದಂತೆ ಯಶಸ್ವಿಗೊಳಿಸುವುದು ಎಲ್ಲ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ವಾಯ್. ಬಾರಿಗಿಡದ, ಜಮಖಂಡಿ ಎ ಸಿ ಸಿದ್ದು ಹುಲ್ಲೊಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.