ಬಾಗಲಕೋಟೆ: ತಾಲೂಕಿನ ಶಿರೂರ ಗ್ರಾಮದ ಬಸವರಾಜ ಜಗನ್ನಾಥ ಭಗವತಿ ತಮ್ಮ ಹಿರೋ ಸ್ಪೆಂಡರ್ ಪ್ಲಸ್ ಮೋಟರ ಸೈಕಲ್ ವಾಹನನ್ನು ಫ್ಯೂಚರ್ ಜನರಲ್ ಇನ್ಸೂರನ್ಸ ಕಂಪನಿ ಹುಬ್ಬಳ್ಳಿ ಇವರಲ್ಲಿ 15 ಲಕ್ಷ ರೂ.ಗಳಿಗೆ ವೈಯಕ್ತಿಕ ಅಪಘಾತ ವಿಮೆ ಮಾಡಿಸಿದ್ದರು.
ಕಳೆದ ವರ್ಷ ಎಪ್ರೀಲ್ 8 ರಂದು ಸುಭೋದಯ ಶಾಲೆ ಕಮತಗಿ ಹತ್ತಿರ ಮೋಟರ್ ಸೈಕಲ್ ಅಪಘಾತಕ್ಕಿಡಾಗಿ ಮೃತ ಪಟ್ಟಿದ್ದರು. ಈ ಬಗ್ಗೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಪತ್ನಿ ವಿದ್ಯಾಶ್ರೀ ಹಾಗೂ ಇಬ್ಬರು ಮಕ್ಕಳು ಪರಿಹಾರ ಕೋರಿ ದಾಖಲೆಗಳೊಂದಿಗೆ ಇನ್ಸೂರನ್ಸ ಕಂಪನಿಗೆ ಮನವಿ ಮಾಡಿದ್ದರು.
ದಾಖಲೆ ಸರಿಯಾಗಿ ಇಲ್ಲವೆಂದು ಕುಂಟು ನೆಪ ಹೇಳಿ ಪರಿಹಾರ ನೀಡಲು ನಿರಾಕರಿಸಿದ್ದರು. ನೊಂದ ಮೃತ ಕುಟುಂಬಸ್ಥರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ಕುರಿತು ಆಯೋಗದಿಂದ ಇನ್ಸೂರನ್ಸ ಕಂಪನಿಗೆ ನೋಟಿಸ್ ನೀಡಿದರು ವಕೀಲರ ಮೂಲಕ ಹಾಜರಾಗಿ ಪುನಃ ಪರಿಹಾಋ ನೀಡಲು ನಿರಾಕರಿಸಿದ ಹಿನ್ನಲೆಯಲ್ಲಿ ಪರಿಹಾರ ಕೊಡದೇ ಸೇವಾ ನ್ಯೂನ್ಯತೆ ತೋರಿದ ಕಂಪನಿಗೆ 15 ಲಕ್ಷ ರೂ.ಗಳ ಪರಿಹಾರದ ಜೊತೆಗೆ ಶೇ.9 ರಷ್ಟು ಬಡ್ಡಿ ಸಮೇತ ದೂರು ದಾಖಲಾದ ದಿನದಿಂದ 2 ತಿಂಗಳೊಳಗಾಗಿ ನೀಡುವಂತೆ ತೀರ್ಪು ನೀಡಿದೆ. ಅಲ್ಲದೇ ಅನಾವಶ್ಯಕವಾಗಿ ಆಯೋಗಕ್ಕೆ ಅಲೆದಾಡಿದ ವಿಶೇಷ ಪರಿಹಾರ 10 ಸಾವಿರ ರೂ. ಹಾಗೂ ಪ್ರಕರಣದ ಖರ್ಚು 5 ಸಾವಿರ ರೂ.ಗಳನ್ನು ಕೊಡಲು ಆಯೋಗದ ಅಧ್ಯಕ್ಷರಾದ ಡಿ.ವೈ.ಬಸಾಪೂರ, ಮಹಿಳಾ ಸದಸ್ಯೆ ಸಿ.ಎಚ್.ಸಮಿಉನ್ನಿಸ್ ಅಬ್ರಾರ್ ಮತ್ತು ಕಮಲಕಿಶೋರ ಜೋಶಿ ಒಳಗೊಂಡ ಪೀಠವು ಮಹತ್ವ ತೀರ್ಪು ನೀಡಿದೆ.