ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿರುವ ಡಿವಿ ಸದಾನಂದಗೌಡ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಮಾಹಿತಿ ತಿಳಿದು ಬಂದಿದೆ.
ಕಾಂಗ್ರೆಸ್ ಸಂಪರ್ಕದಲ್ಲಿರುವುದನ್ನು ಗೌಡ್ರು ಹೇಳಿದ್ದು, ಇಂದು ಒಕ್ಕಲಿಗರ ಸಂಘದೊಂದಿಗೆ ಸಭೆ ನಡೆಸಿದ ಸದಾನಂದಗೌಡ, ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಸದಾನಂದ ಗೌಡ ಅವರ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದು ಸಂಘದ ಅಧ್ಯಕ್ಷರು ಘೋಷಿಸಿದ್ದಾರೆ.
ನಾಳೆ ಸುದ್ದಿಗೋಷ್ಠಿ ನಡೆಸಿ ಎಲ್ಲಾ ವಿಚಾರ ಹೇಳುತ್ತೇನೆ ಎಂದು ಹೇಳಿದ ಸದಾನಂದಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷರು, ನಿರ್ದೇಶಕರ ಜೊತೆ ಸಭೆ ನಡೆಸಿದ್ದೇನೆ. ಒಂದಷ್ಟು ವಿಚಾರ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಈಗ ಯಾವುದನ್ನೂ ನಾನು ಹೇಳುವುದಿಲ್ಲ. ಎಲ್ಲವನ್ನೂ ನಾಳೆ ಹೇಳುತ್ತೇನೆ ಎಂದರು.
ಸಭೆ ಬಳಿಕ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ, ಸದಾನಂದಗೌಡರು ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ಬೆಂಬಲವಿದೆ. ನಾಳೆ ಅವರೇ ಸುದ್ದಿಗೋಷ್ಠಿ ಮಾಡಿ ಎಲ್ಲಾ ಹೇಳುತ್ತಾರೆ ಎಂದರು.