ರಾಷ್ಟ್ರೀಯ ಪೋಷನ್ ಅಭಿಯಾನ
ನಿಮ್ಮ ಸುದ್ದಿ ಬಾಗಲಕೋಟೆ
ಸ್ವಾತಂತ್ರ್ಯ ಬಂದು ಎಪ್ಪತೈದು ವರ್ಷವಾದರೂ ಇನ್ನೂ ಶೇ.35 ರಷ್ಟು ಗರ್ಭಿಣಿಯರು ಮತ್ತು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಇದರ ನಿರ್ಮೂಲನೆಗಾಗಿ ಎಲ್ಲರೂ ಪಣತೊಡಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅಮರೇಶ ಹೇಳಿದರು.
ತಾಲೂಕಿನ ಯಡಹಳ್ಳಿ ಗ್ರಾಮದ ಅಜಾತ ನಾಗಲಿಂಗೇಶ್ವರ ಮಠದಲ್ಲಿ ಜಿಲ್ಲಾಡಳಿ, ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ ಅಭಿಯಾನ ಹಾಗೂ ಗರ್ಭಿಣಿಯರ ಉಡಿತುಂಬುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿಗೂ ಕೂಡಾ ಶೇ.48 ರಷ್ಟು ಗರ್ಭಿಣಿಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಕನಿಷ್ಟ ಗರ್ಭಿಣಿಯರ ರಕ್ತ ಪ್ರಮಾಣ 12 ರಿಂದ 13 ಎಂ.ಜಿ ಇರಬೇಕು. ಅದಕ್ಕಾಗಿ ಗರ್ಭಾವಸ್ಥೆಯಲ್ಲಿ ಹೆಚ್ಚಿನ ಪೋಷಕಾಂಶಗಳುಳ್ಳ ಆಹಾರ ಹಾಗೂ ಉತ್ತಮ ಪರಿಸರದಲ್ಲಿರಬೇಕು ಎಂದರು.
ಅಪೌಷ್ಟಿಕತೆಯಿಂದಾಗಿ ಅಂಗವಿಕಲ, ಬುದ್ದಿಮಾಂದ್ಯ ಮಕ್ಕಳು ಜನಿಸುತ್ತಿದ್ದು, ಕೆಲವೊಮ್ಮೆ ತಾಯಿ ಹಾಗೂ ಮಗುವಿಗೂ ಮಾರಣಾಂತಿಕ ಸಮಸ್ಯೆ ಬರುತ್ತದೆ. ಈ ಅಭಿಯಾನ ಒಂದು ತಿಂಗಳಿನ ಅವಧಿಯ ಕಾರ್ಯವಾಗಿದ್ದು, ಪ್ರತಿಯೊಂದು ಗ್ರಾಮದಲ್ಲಿ ಚಳುವಳಿಯಂತೆ ಈ ಕಾರ್ಯ ನಡೆಯಬೇಕಾಗಿದೆ ಎಂದು ತಿಳಿಸಿದರು.
ಮಹಿಳಾ ಶಿಶು ಅಭಿವೃದ್ದಿ ಅಧಿಕಾರಿ ಶಿಲ್ಪಾ ಹಿರೇಮಠ ಮಾತನಾಡಿ ಹಿಂದಿನ ಕಾಲದ ಆಹಾರ ಪದ್ದತಿಗೂ ಇಂದಿನ ಆಹಾರಕ್ಕೂ ವ್ಯತ್ಯಾಸವಿದ್ದು, ಮೊದಲಿನ ಜನರಂತೆ ಇಂದಿನ ಮಹಿಳೆಯರು ಜೀವಿಸುತ್ತಿಲ್ಲ.ಪ್ರತಿ ಕುಟುಂಬದ ಮಹಿಳೆ ಮೊದಲು ಪತಿ, ಮಕ್ಕಳು, ಅತ್ತಿ, ಮಾವ ಇವರೆಲ್ಲರಿಗೂ ಊಟ ಬಡಿಸಿ ತಾನು ಊಟ ಮಾಡುತ್ತಿದ್ದರು. ಅಷ್ಟರೊಳಗೆ ಸಮಯ ಮುಗಿದು ಹೋಗುತ್ತದೆ. ಅಂಥ ಸಮಯದಲ್ಲಿ ತೃಪ್ತಿಯಾದ ಊಟ ದೊರೆಯದೇ ಅಶಕ್ತತೆ ಉಂಟಾಗುತ್ತದೆ ಎಂದರು.
ಇದನ್ನೇಲ್ಲ ಗಮನಿಸಿದ ಸರಕಾರ ಗರ್ಭಾವತಿ, ಬಾನಂತಿ, ಶಿಶುಗಳ ರಕ್ಷಣೆಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಪ್ರತಿ ಅಂಗನವಾಡಿ ಕೇಂದ್ರಗಳಿಂದ ಹಿಡಿದು ಶಾಲೆಗಳಲ್ಲೂ ಕೂಡಾ ಅಪೌಷ್ಟಿಕತೆಗಾಗಿ ಜಾಗೃತಿ ಮೂಡಿಸಲಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೇಲ್ವಿಚಾರಕಿ ಮಂಜುಳಾ ಇದ್ದಲಗಿ ಮಾತನಾಡಿ ಈ ಭೂಮಿಗೆ ಬರುವ ಮೊದಲ ಅತಿಥಿ ಹಾಗೂ ಅದಕ್ಕೆ ಜನ್ಮ ನೀಡುವ ತಾಯಿಯರನ್ನು ರಕ್ಷಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದು, ಜನಿಸುವ ಪ್ರತಿಯೊಬ್ಬ ಮಗು ದೇಶದ ಸಂಮೃದ್ದ ಆಸ್ತಿಯಾಗಬೇಕೆಂಬ ಉದ್ದೇಶದಿಂದ ಮತ್ತು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯಲ್ಲಾಗುವ ಅಪಾಯ ತಪ್ಪಿಸಲು ಸುಧಾರಿತ ಯೋಜನೆ ಇದಾಗಿದ್ದು, ಪ್ರತಿಯೊಬ್ಬರು ಇದರ ಲಾಭ ಪಡೆಯಬೇಕೆಂದರು.
ಇದೇ ಸಮಯದಲ್ಲಿ ಗರ್ಭವತಿಯರಿಗೆ ಉಡಿ ತುಂಬಲಾಯಿತು.
ಉತ್ತಮ ಕಾರ್ಯನಿರ್ವಹಿಸಿದ ಅಂಗನವಾಡಿ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಭಾಗ್ಯಲಕ್ಷ್ಮೀ ಯೋಜನೆಯ, ಸುಕನ್ಯ ಸಮೃದ್ದಿ ಪಾಸ್‍ಬುಕ್ ವಿತರಿಸಲಾಯಿತು. ಮಕ್ಕಳ ವಿವಿಧ ಮನರಂಜನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ರುದ್ರಪ್ಪ ಮೆಣಸಗಿ, ಉಪಾದ್ಯಕ್ಷೆ ಮಾಲಾ ನಾಲತ್ವಾಡ, ಗ್ರಾ.ಪಂ ಸದಸ್ಯರು, ಗ್ರಾ.ಪಂ ಪಿಡಿಓ ಪರಮೇಶ್ವರ ಚಲವಾದಿ, ಮೇಲ್ವಿಚಾರಕರಾದ ರೂಪಾ ಇದ್ದಲಗಿ, ಗೀತಾ ನಾಯ್ಕ, ಮಹಾದೇವಿ ಮೇತ್ರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಶಿಕ್ಷಕಿ ಭಜಂತ್ರಿ ನಿರೂಪಿಸಿದರು. ಶಾಂತಾ ಗೌಡರ ವಂದಿಸಿದರು.