ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಹೆಚ್ಚಳಕ್ಕೆ ಸರ್ಕಾರ ಅಂಕುಶವೂ ಇಲ್ಲದಿರೋದ್ರಿಂದ ಖಾಸಗಿ ಶಾಲೆಗಳು ಬೇಕಾಬಿಟ್ಟಿ ಶುಲ್ಕಗಳನ್ನ ಏರಿಕೆ ಮಾಡುತ್ತಿರೋದು ಪೋಷಕರಿಗೆ ಕಂಗೆಡಿಸಿದ್ದು, ಇತ್ತ ಶುಲ್ಕವನ್ನ ಕಟ್ಟೋಕೂ ಆಗದೇ, ಬಿಡೋಕೂ ಆಗದೇ ಪರದಾಡುವಂತಾಗಿದೆ.
ಪ್ರತಿ ವರ್ಷ ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸುವಾಗಲು ಪಾಲಕರು ವಿದ್ಯಾರ್ಥಿಗಳ ಶಾಲಾ ಶುಲ್ಕದ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಶುಲ್ಕದಲ್ಲಿ ಏರಿಕೆಯಾಗುತ್ತಲೇ ಇರುತ್ತದೆ ಅದೇ ರೀತಿ ಈ ವರ್ಷವೂ ಪಾಲಕರಿಗೆ ಶುಲ್ಕ ಏರಿಕೆಯ ಬಿಸಿ ತಗುಲಲಿದೆ ಎಂಬ ಸೂಚನೆ ಸಿಕ್ಕಿದೆ. ಖಾಸಗಿ ಶಾಲೆಗಳು 2023-24ನೇ ಸಾಲಿನಿಂದ ಶುಲ್ಕವನ್ನು ಹೆಚ್ಚಳ ಮಾಡುತ್ತಿವೆ. ಹಿಂದಿನ ವರ್ಷಕ್ಕಿಂತ ಈ ವರ್ಷ 30 ರಿಂದ 40 ಪ್ರತಿಶತ ಶುಲ್ಕ ಹೆಚ್ಚಳ ಮಾಡಿದ ಕುರಿತು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಶಾಲೆಗಳಿಗೆ ಶೇ.10-15ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಶಾಲಾ ಸಂಘಗಳು ಸೂಚಿಸಿದ್ದರೂ ನಗರದ ಹಲವು ಶಾಲೆಗಳು ಅದನ್ನು ಪಾಲಿಸಿಲ್ಲ. ಎಲ್ಲಾ ವರ್ಗದ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಕಂಡುಬರುತ್ತಿದೆ. ಇನ್ನು ಈ ವರ್ಷ ಜನವರಿ 5 ರಂದು ಹೈಕೋರ್ಟ್ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳವನ್ನು ಸರ್ಕಾರ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.
ಕರ್ನಾಟಕ ಶಿಕ್ಷಣ ಕಾಯಿದೆ, 1983 ರಲ್ಲಿ ಹಲವಾರು ನಿಬಂಧನೆಗಳನ್ನು ಹೊಂದಿದೆ, ಅದರ ಅಡಿಯಲ್ಲಿ ಸರ್ಕಾರ, ಶುಲ್ಕಗಳು ಮತ್ತು ಮಕ್ಕಳ ಸುರಕ್ಷತಾ ಮಾನದಂಡಗಳನ್ನು ಸಂವಿಧಾನಿಕವಾಗಿ ಸೂಚಿಸಬಹುದು ಎಂದು ಹೈಕೋರ್ಟ್ ಹೇಳಿತ್ತು. ಇನ್ನು ಶುಲ್ಕ ಹೆಚ್ಚಳಾತಿಗೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಅನಿವಾರ್ಯತೆ ಸೃಷ್ಠಿಸುತ್ತಿದೆ. ನೀರು, ಕರೆಂಟ್ ಬಿಲ್, ಟ್ಯಾಕ್ಸ್ ಸೇರಿದಂತೆ ವಿವಿಧ ನೊಂದಣಿಗಳಿಗೆ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ ಇನ್ನೊಂದೆಡೆಗೆ ಹೆಚ್ಚು ಹೆಚ್ಚು ಶಾಲೆಗಳಿಗೆ ಅನುಮತಿ ನೀಡಲಾಗುತ್ತಿದೆ.
ಈ ರೀತಿ ಶುಲ್ಕ ಹೆಚ್ಚಳ ಮಾಡಿರುವುದು ಅಸಂವಿಧಾನಿಕ ಶುಲ್ಕ ಹೆಚ್ಚಳ ಮಾಡಬೇಕಾದರೆ ವೈಜ್ಞಾನಿಕ ಕಾರಣ ಕೊಟ್ಟು ಶಿಕ್ಷಣ ಇಲಾಖೆಗೆ ಪತ್ರ ಬರೆಯಬೇಕು. ಇಲಾಖೆ ಅನುಮತಿ ಕೊಟ್ರೆ ಮಾತ್ರ ಶುಲ್ಕ ಹೆಚ್ಚಳ ಮಾಡಬಹುದು. ಈಗಾಗಲೇ 17 ರಾಜ್ಯಗಳಲ್ಲಿ ಶುಲ್ಕ ನಿಯಂತ್ರಣ ಕಾನೂನು ಜಾರಿಯಲ್ಲಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಶುಲ್ಕ ನಿಯಂತ್ರಣ ಕಾನೂನು ಬರಬೇಕು ಎಂದು ಪೋಷಕ ಸಮನ್ವಯ ಸಮಿತಿ ಅಧ್ಯಕ್ಷ ದಯಾನಂದ ತಿಳಿಸಿದರು.