ವಿಜಯಪುರ: ನನ್ನ ಬಿಟ್ಟರೆ ಯಾರಿಗೂ ಟಿಕೆಟ್ ಕೊಡಲ್ಲ. ಪಕ್ಷದವರು ನನಗೆ ಸ್ಪಷ್ಟವಾಗಿ ಹೇಳಿದ್ದಾರೆ. ನೀ ಏನು ಚಿಂತೆ ಮಾಡಬೇಡ, ನೀನು ಸತ್ತರೂ ಜನ ನಿನ್ನು ಹೆಣಕ್ಕೆ ಮತ ಹಾಕಲಿ ಎಂದು ವರಿಷ್ಠರು ನನಗೆ ಹೇಳಿದ್ದಾರೆ. ನನ್ನ 70 ವರ್ಷಗಳ ರಾಜಕಾರಣದಲ್ಲಿ ನನಗೆ ಯಾರು ಅಡ್ಡ ಬಂದಿದ್ದಾರೆ ಅವರು ಯಾರೂ ಬದುಕಿಲ್ಲ. ನನ್ನ ವಿರೋಧ ಮಾಡಿದವರು ಯಾರು ರಾಜಕೀಯದಲ್ಲಿ ಉಳಿದಿಲ್ಲ. ದೇವರೇ ಅವರನ್ನು ಖಲಾಸ್ ಮಾಡುತ್ತಾನೆಂದು ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ದಲಿತ ವ್ಯಕ್ತಿಯಾಗಿ ಇತಿಹಾಸ ನಿರ್ಮಾಣ ಮಾಡಿದ್ದೇನೆ. ನನಗೆ 93 ವಯಸ್ಸಾದರೂ ಇತಿಹಾಸ ನಿರ್ಮಾಣ ಮಾಡಿಯೇ ಸಾಯುತ್ತೇನೆ. ನಾನು ಇತಿಹಾಸ ನಿರ್ಮಾಣ ಮಾಡಲಿ ಎಂದು ದೇವರು ನನ್ನ ಹಣೆ ಬರಹದಲ್ಲಿ ಬರೆದಿದ್ದಾನೆ. ಅಲ್ಲಿಯವರಗು ನಾನು ಬದುಕುತ್ತೇನೆ. ನಾನು ಕ್ರಿಕೆಟ್ ಆಡಲು ಬ್ಯಾಟ್ ಹಿಡಿದುಕೊಂಡು ನಿಂತಿದ್ದೇನೆ. ಬಾಲ್ ಬರುವುದನ್ನೇ ಕಾಯುತ್ತಿದ್ದೇನೆ ಎಂದರು.
ನನ್ನ ಆರೋಗ್ಯದ ಕುರಿತು ಬಹಳ ಜನ ಅಪಪ್ರಚಾರ ಮಾಡಿದ್ದು, ನಾನು ಆಸ್ಪತ್ರೆಯಲ್ಲಿದ್ದೇನೆ, ಮೃತಪಡುತ್ತೇನೆ ಎಂದು ಬಿಜೆಪಿ ಅಧ್ಯಕ್ಷರ ಮುಂದೆ ಹೇಳಿದ್ದಾರೆ. ನನ್ನ ಸಾವು ಇವರ ಕೈಯಲ್ಲಿ ಇಲ್ಲ. ಹಣೆ ಬರಹವನ್ನು ಯಾರೂ ಅಳಿಸಲು ಸಾಧ್ಯವಿಲ್ಲ. ನಾನು ಬೇಗ ಸಾಯಲಿ, ಏನಾದರೂ ಆಗಬೇಕೆಂದು ಕೆಲವರು ಹೇಳುತ್ತಿದ್ದಾರೆ ಎಂದು ಹೇಳಿದರು.
ಚಿಕ್ಕೋಡಿಯಲ್ಲಿ ಮೂರು ಬಾರಿ ಸಂಸದನಾಗಿ ಆಯ್ಕೆಯಾಗಿದ್ದು, ವಿಜಯಪುರದಲ್ಲಿ ಮೂರು ಬಾರಿ ಗೆದ್ದಿದ್ದೇನೆ. ರಮೇಶ್ ಜಿಗಜಿಣಗಿ ಲಿಂಗಾಯತ ವಿರೋಧಿ ಎಂದು ಹೇಳುತ್ತಿದ್ದಾರೆ. ಅವರ ನಾಲಿಗೆಯನ್ನು ದೇವರು ಕತ್ತರಿಸಲಿ. ನಾನು ಲಿಂಗಾಯತ ವಿರೋಧಿಯಲ್ಲ. ನಾನು ಜಾತಿ ರಾಜಕಾರಣ ಮಾಡಿಲ್ಲ. ನಾನು ಲಿಂಗಾಯತ ವಿರೋಧಿಯಲ್ಲ, ನನಗೆ ಎಲ್ಲರೂ ಬೇಕು. ನನಗೆ ಕೆಟ್ಟದ್ದನ್ನು ಮಾಡಿದವರಿಗೂ ಒಳ್ಳೆಯದ್ದನ್ನೇ ಮಾಡಿದ್ದೇನೆ ಎಂದು ವಿವರಿಸಿದರು.