ಬೆಂಗಳೂರು: ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ, ಅವರವರ ನಡುವೆಯೇ ಷಡ್ಯಂತ್ರಗಳು ನಡೆಯುತ್ತಿವೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಅನೇಕ ಶಕ್ತಿಗಳು ಒಂದಾಗಿವೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಳಸಿಕೊಳ್ಳಲು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಸ್ವತಃ ಪ್ರಹ್ಲಾದ ಜೋಶಿ ಮೂರು ವರ್ಷಕ್ಕಷ್ಟೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದಿದ್ದಾರೆ ಎಂದು ಉಲ್ಲೇಖಿಸಿದರು.
‘ನಾನು ವಿಜಯಪುರ, ಬಳ್ಳಾರಿ ಎಲ್ಲ ಕಡೆ ಓಡಾಡಿದ್ದೇನೆ. ಬಿಸಿಲನ್ನೂ ಲೆಕ್ಕಿಸದೆ ಉತ್ಸುಕರಾಗಿ ಜನ ಸ್ಪಂದನೆ ಮಾಡ್ತಿದ್ದಾರೆ. ಬೆಳಗಾವಿ ಬೀದರ್ ಗುಲ್ಬರ್ಗ ಸೇರಿ ಎಲ್ಲ ಕಡೆ ಕಾಂಗ್ರೆಸ್ ಪರವಾಗಿದೆ. ಹಾವೇರಿಯಲ್ಲೂ ಕಾಂಗ್ರೆಸ್ ಗೆಲುವು ವಾತಾವರಣ ಇದೆ. ಉಸ್ತುವಾರಿ ಸಚಿವರು ಗೆಲುವಿಗೆ ಕೆಲಸ ಮಾಡಲೇಬೇಕಾಗುತ್ತದೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
10 ವರ್ಷ ಮೋದಿಯವರ ಆಶ್ವಾಸನೆ ಜನರು ನಂಬಿಕೊಂಡಿದ್ರು. ಮೋದಿಯವರ ಅಚ್ಚೇ ದಿನ್ ಬರಲೇ ಇಲ್ಲ. ಕಾಂಗ್ರೆಸ್ ನ ಭಾಗ್ಯ ಯೋಜನೆ, ಗ್ಯಾರಂಟಿ ಗಳು ಮಹಿಳೆಯರ ಮೇಲೆ ಪ್ರಭಾವ ಬೀರಿದೆ. ನರೇಂದ್ರ ಮೋದಿ 99% ಟ್ರೋಲ್ ಆಗ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ತುಂಬ ಮೋದಿಯೇ ಟ್ರೋಲ್ ಆಗ್ತಿದ್ದಾರೆ ಎಂದು ವಿವರಿಸಿದರು.
‘ ಬಿಎಸ್‌ವೈ, ವಿಜಯೇಂದ್ರ ರಾಜ್ಯದಲ್ಲಿ ಪ್ರವಾಸ ಮಾಡಿದ ತಕ್ಷಣ ಲಿಂಗಾಯತ ಮತಗಳೆಲ್ಲ ಬಿಜೆಪಿಗೆ ಹೋಗಲ್ಲ. ನಮ್ಮಲ್ಲೂ ವೀರಶೈವ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಕೊಡಲಾಗಿದೆ. ಸಚಿವರು, ಶಾಸಕರು ಇದ್ದೇವೆ. ಹೀಗಾಗಿ ವೀರಶೈವ ಲಿಂಗಾಯತ ಮತಗಳು ಅಸೆಂಬ್ಲಿಯಂತೆ ಲೋಕಸಭೆಯಲ್ಲೂ ಕೈ ಹಿಡಿಯಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.