ಕರ್ತವ್ಯಕ್ಕೆ ಚ್ಯುತಿ ತರದಂತೆ ಕರ್ತವ್ಯ ನಿರ್ವಹಿಸಿ:ಪೊಲೀಸ್ ಮಹಾನಿರೀಕ್ಷಕ ಸತೀಶ ಕುಮಾರ
ನಿಮ್ಮ ಸುದ್ದಿ ಬಾಗಲಕೋಟೆ
ಆಧುನಿಕ ತಂತ್ರಜ್ಞಾನದ ಇಂದಿನ ದಿನದಲ್ಲಿ ಪೊಲೀಸರ ಮೇಲೆ ಸಮಾಜದ ನಿಗಾ ಇದ್ದು, ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಇಲಾಖೆ ಹಾಗೂ ಸಮಾಜದ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಪೊಲೀಸರು ಕಾರ್ಯನಿರ್ವಹಿಸಬೇಕು ಎಂದು ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಎಸ್.ಸತೀಶಕುಮಾರ ಕರೆ ನೀಡಿದರು.
ನವನಗರದ ಪೊಲೀಸ್ ತರಬೇತಿ ಶಾಲೆಯಲ್ಲಿ ಸೋಮವಾರ ಜರುಗಿದ 11ನೇ ತಂಡದ ಸಿಪಿಸಿ, ಆರ್‌ಪಿಸಿ, ಮತ್ತು ಎಪಿಸಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಮಾತನಾಡಿದರು. ಇಂದಿನ ದಿನದಲ್ಲಿ ಒಂದು ಚಿಕ್ಕ ಘಟನೆಯಾದರೂ ತಕ್ಷಣ ವೈರಲ್ ಆಗುತ್ತದೆ. ಹತ್ತು ಒಳ್ಳೆಯ ಕೆಲಸ ಮಾಡಿ ಒಂದು ತಪ್ಪು ಮಾಡಿದ ಘಟನೆ ವೈರಲ್ ಆದರೆ ಇಡೀ ಪೊಲೀಸ್ ವ್ಯವಸ್ಥೆಗೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕರ್ತವ್ಯ ಬದ್ಧತೆಯಿಂದಚಾಕಚಕ್ಯತೆಯಿಂದ ಕೆಲಸ ನಿರ್ವಹಿಸಬೇಕು ಎಂದರು.
ಜಾಗತೀಕರಣದ ಹಾಗೂ ಕೊಳ್ಳುಬಾಕ ಸಂಸ್ಕೃತಿ ಇಂದಿನ ದಿನಗಳಲ್ಲಿ ಅನವಶ್ಯಕ ಖರ್ಚು ಮಾಡಿ, ವೈಭೋಗತನಕ್ಕೆ ಮರುಳಾಗದೇ ತಮ್ಮ ವೇತನದ ಇತಿಮಿತಿಯಲ್ಲಿಉತ್ತಮ ಜೀವನ ನಡೆಸುವಂತೆ ಪ್ರಶಿಕ್ಷಿಣಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪೊಲೀಸರು ತಮ್ಮ ಆರೋಗ್ಯ ನಿರ್ಲಕ್ಷಿಸದೇ ಉತ್ತಮ ದೇಹ, ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು. ಇಲಾಖೆಯಲ್ಲಿ ಈಗ ಉತ್ತಮ ಆರೋಗ್ಯ ಸೇವೆಗಳು ಲಭ್ಯವಿರುತ್ತವೆ ಎಂದರು.
ಎಸ್.ಪಿ. ಜಯಪ್ರಕಾಶ ಪ್ರತಿಜ್ಞಾವಿಧಿ ಭೋದಿಸಿದರು. ರಾಜ್ಯದ ವಿವಿದೆಡೆಯಿಂದ 115 ಜನ ಪ್ರಶಿಕ್ಷಣಾರ್ಥಿಗಳು 8 ತಿಂಗಳ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಈ ಎಲ್ಲ ಪ್ರಶಿಕ್ಷಣಾರ್ಥಿಗಳು ಸ್ನಾತಕೋತ್ತರ, ಇಂಜನೀಯರಿಂಗ್, ನಾನಾ ಪದವಿ ಹಾಗೂ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದ್ದಾರೆ.
ಫೈರಿಂಗ ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ಪಡೆಕನೂರ, ಎಪಿಸಿ ಶಿವಾನಂದ ತಳ್ಳೊಳ್ಳಿ ಪ್ರಥಮ, ಬೆಳಗಾವಿಯ ಹಿಡಕಲ್ ನ ಸಿಪಿಸಿ ಪ್ರಮೋದ ನಿಡಗುಂದಿ ಹಾಗೂ ಬಾಗಲಕೋಟೆ ಜಿಲ್ಲೆಯ ಜಗದಾಳ ಗ್ರಾಮದ ಎಪಿಸಿ ಭರಮಪ್ಪ ನಾಗವ್ವಗೋಳ ದ್ವೀತಿಯ ಹಾಗೂ ಬೆಂಗಳೂರು ನಗರದ ದಾಸರಹಳ್ಳಿಯ ಸುಜಿತ್ ರಾವ್ ತೃತೀಯ ಸ್ಥಾನ ಪಡೆದಿದ್ದಾರೆ. ಆಲ್ ರೌಂಡ್ ಬೆಸ್ಟ್ ಬಹುಮಾನವನ್ನು ವಿಜಯಪುರದ ಬಸವರಾಜ ಪಾಟೀಲ ತಮ್ಮದಾಗಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ನಾನಾ ತಂಡಗಳಿಂದ ಕವಾಯತು ಪ್ರದರ್ಶನ ನಡೆಯಿತು. ಡಿಎಸ್ ಪಿ ಪ್ರಕಾಶ ಮನ್ನೊಳ್ಳಿ, ಭರತ ತಳವಾರ, ಜಿಪಂ ಸಿಇಒ ಟಿ.ಭೂಬಾಲನ್, ಪೊಲೀಸ್ ಅಧಿಕಾರಿಗಳು ಇದ್ದರು.