ಮಹಾಶಿವರಾತ್ರಿ ಹಬ್ಬವು ಶಿವನಿಗೆ ಸಮರ್ಪಿತವಾಗಿದ್ದು ಈ ದಿನ, ಭಕ್ತರು ಪೂರ್ಣ ಭಕ್ತಿಯಿಂದ ಶಿವನನ್ನು ಪೂಜಿಸುತ್ತಾರೆ ಮತ್ತು ಶಿವನ ದೇವಾಲಯಗಳಿಗೆ ಹೋಗಿ ಆತನ ಪ್ರೀಯ ವಸ್ತುಗಳನ್ನು ಅರ್ಪಿಸಿ ಬರುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಇರುವ ಶಿವಲಿಂಗಕ್ಕೆ ಪೂಜೆ ಮಾಡುತ್ತಾರೆ. ಮಹಾಶಿವರಾತ್ರಿಯಂದು ರುದ್ರಾಭಿಷೇಕ ಮತ್ತು ಬಿಲ್ವಪತ್ರೆಯ ಅರ್ಪಣೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.ಈ ದಿನ ಶಿವನ ಅಭಿಷೇಕಕ್ಕೆ ಕೆಲವು ವಸ್ತುಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.
ಇದು ಕೆಲವು ಪ್ರದೇಶ ಮತ್ತು ಜನಾಂಗಗಳಿಗೆ ಅನುಸಾರವಾಗಿ ಭಿನ್ನವಾಗಿರುತ್ತದೆ. ನೀರಿನ ಅಭಿಷೇಕ ಎಲ್ಲದಕ್ಕಿಂತ ಮುಖ್ಯ ಎನ್ನಲಾಗುತ್ತದೆ ಏಕೆಂದರೆ ಶಿವ ಉಗ್ರ ರೂಪಿ ಹಾಗಾಗಿ ಅವನನ್ನು ತಂಪು ಮಾಡಲು ನೀರಿನ ಅಭಿಷೇಕ ಮಾಡಲಾಗುತ್ತದೆ. ಇದರ ಹೊರತಾಗಿ, ಶಿವನ ಅಭಿಷೇಕಕ್ಕೆ ಹಸುವಿನ ತುಪ್ಪ, ಗಂಧದ ನೀರು, ಹೂವು, ಬಿಲ್ವಪತ್ರೆಯ ನೀರು, ಜೇನುತುಪ್ಪ, ಮೊಸರು, ಹಾಲು, ಪಂಚಾಮೃತ, ಕಬ್ಬಿನ ರಸ, ಎಳನೀರು, ಚಂದನದ ನೀರು ಇತ್ಯಾದಿ ವಸ್ತುಗಳನ್ನು ಅಭಿಷೇಕಕ್ಕೆ ಬಳಸಿಕೊಳ್ಳಬಹುದು.ಈ ದಿನ ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಎಲ್ಲಾ ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ. ಮನೆಯಲ್ಲಿ ರುದ್ರಾಭಿಷೇಕ ಮಾಡಲು, ಶಿವಲಿಂಗವನ್ನು ಉತ್ತರ ದಿಕ್ಕಿನಲ್ಲಿ ಇರಿಸಿ ಮತ್ತು ರುದ್ರಾಭಿಷೇಕ ಮಾಡುವವರ ಮುಖವು ಪೂರ್ವ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ.
ನೀರಿನ ಮೂಲಕ ಅಭಿಷೇಕವನ್ನು ಪ್ರಾರಂಭಿಸಿ, ನಂತರ ಕಬ್ಬಿನ ರಸ, ಜೇನುತುಪ್ಪ, ಮೊಸರು, ಹಾಲು, ಪಂಚಾಮೃತ ಮತ್ತು ಇನ್ನಿತರ ದ್ರವದೊಂದಿಗೆ ಭಕ್ತಿಯಿಂದ ಶಿವಲಿಂಗದ ಅಭಿಷೇಕ ಮಾಡಿ.ಜಾತಕದಲ್ಲಿರುವ ಸರ್ಪ ದೋಷ ನಿವಾರಣೆಗೆ ರುದ್ರಾಭಿಷೇಕ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಶಿವನ ಅನುಗ್ರಹದಿಂದ, ಗ್ರಹಗಳ ದೋಷಗಳು ಸಹ ನಿವಾರಣೆಯಾಗುತ್ತದೆ. ಜೊತೆಗೆ ರುದ್ರಾಭಿಷೇಕ ಮಾಡುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ, ಸಂಪತ್ತು, ಸಮೃದ್ಧಿ ಎಲ್ಲವೂ ಪ್ರಾಪ್ತವಾಗುತ್ತದೆ.
ಸಂಪ್ರದಾಯದ ಪ್ರಕಾರ, ನೀವು ಹೊಸ ಮನೆ ಅಥವಾ ಹೊಸ ಕಾರನ್ನು ಖರೀದಿಸಲು ಬಯಸಿದರೆ, ಮೊಸರಿನೊಂದಿಗೆ ರುದ್ರಾಭಿಷೇಕ ಮಾಡಿ.
ಹಣದ ಕೊರತೆ ನೀಗಿಸಲು ಕಬ್ಬಿನ ರಸದಿಂದ ರುದ್ರಾಭಿಷೇಕ ಮಾಡಬೇಕು ಮತ್ತು ಸಂಪತ್ತನ್ನು ಹೆಚ್ಚಿಸಲು ಜೇನುತುಪ್ಪ ಮತ್ತು ತುಪ್ಪದಿಂದ ರುದ್ರಾಭಿಷೇಕ ಮಾಡಬೇಕು ಎಂದು ನಂಬಲಾಗಿದೆ.