ನಿಮ್ಮ ಸುದ್ದಿ ಬಾಗಲಕೋಟೆ
ಸ್ತ್ರೀ ಸಮಾಜಕ್ಕೆ ಅಕ್ಷರದ ಕಟ್ಟುಪಾಡುಗಳನ್ನು ಕಟ್ಟಿಕೊಟ್ಟು ಶಿಕ್ಷಣದ ಶ್ರೀಗಂಧ ಪರಿಮಳವನ್ನು ನೀಡಿದವರು ಸಾವಿತ್ರಿಭಾಯಿ ಫುಲೆ ಅವರು ಎಂದು ಲಕ್ಷ್ಮೀ ಸಂತೋಷ ಐಹೊಳೆ ಹೇಳಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯ ಕಾಮಧೇನು ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಸಾವಿತ್ರಿಭಾಯಿ ಫುಲೆ ಜನ್ಮದಿನದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮಾಜಿಕ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ಸಶಕ್ತ ಸ್ತ್ರೀ ಸಮಾಜಕ್ಕೆ ಕಾರಣಕರ್ತರಾಗಿದ್ದಾರೆ. ನಿಂದನೆಗೆ ಒಳಪಡಿಸಿದ ಸಮಾಜದಲ್ಲೇ ಗೌರವಕ್ಕೆ ಒಳಪಡುವ ಸ್ತ್ರೀ ಸಮಾಜ ಕಟ್ಟಿ ಅಕ್ಷರದವ್ವ ಆಗಿದ್ದಾರೆ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಬಡ ಮಕ್ಕಳಿಗೆ ಶಬ್ಧಕೋಶ ವಿತರಣೆ ನಡೆಯಿತು. ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರಸಾ ನಿರಂಜನ ಉದ್ಘಾಟಿಸಿದರು. ಅತಿಥಿಗಳಾಗಿ ಸಕ್ಕೂಬಾಯಿ ದಡ್ಡೇನವರ, ಭಾಗ್ಯಶ್ರೀ ಜೀರಗಿ, ಶಂಕ್ರಮ್ಮ ಹೊಸಮನಿ ಆಗಮಿಸಿದ್ದರು.
ಮಾನು ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘ, ಸಂಘದ ಉದ್ದೇಶ ಹಾಗೂ ಕಾರ್ಯಕ್ರಮಗಳ ಕುರಿತು ಪಾಂಡುರಂಗ ದಡ್ಡೇನವರ ಸಂಕ್ಷಿಪ್ತ ಪರಿಚಯ ಮಾಡಿದರು. ಅಶೋಕ ಕಟಗೇರಿ ನಿರೂಪಿಸಿದರೆ, ಮಹೇಶ ಜೀರಗಿ ವಂದಿಸಿದರು. ಸೂಳೇಬಾವಿ ಗ್ರಾಮದ ಮಹಿಳಾ ಸಂಘಗಳು, ನಾನಾ ಶಾಲೆಗಳ ವಿದ್ಯಾರ್ಥಿಗಳು ಇದ್ದರು.