ವಾರಾಣಸಿ: ಲೋಕಸಭೆ ಚುನಾವಣೆ (Lok Sabha Election 2024) ಬಳಿಕ ಇದೇ ಮೊದಲ ಬಾರಿಗೆ ತಮ್ಮ ಲೋಕಸಭೆ ಕ್ಷೇತ್ರವಾದ ವಾರಾಣಸಿಗೆ (Varanasi) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ (ಜೂನ್ 18) ಭೇಟಿ ನೀಡಿದ್ದಾರೆ. ಅಲ್ಲದೆ, ವಾರಾಣಸಿಯಲ್ಲಿ ನಡೆದ ಕಿಸಾನ್ ಸಮ್ಮೇಳನದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ (Kisan Samman Nidhi) ಯೋಜನೆಯ 17ನೇ ಕಂತಿನ ಮೊತ್ತವಾದ 20 ಸಾವಿರ ಕೋಟಿ ರೂಪಾಯಿಯನ್ನು ದೇಶದ 9.26 ಕೋಟಿ ರೈತರ ಖಾತೆಗಳಿಗೆ ಜಮೆ ಮಾಡಿದರು.
ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಮಾಡಿದ ಬಳಿಕ ನರೇಂದ್ರ ಮೋದಿ ಅವರು ಮೊದಲಿಗೆ ರೈತರ ಖಾತೆಗಳಿಗೆ ತಲಾ 2 ಸಾವಿರ ರೂ. ಜಮೆ ಮಾಡುವ ದಿಸೆಯಲ್ಲಿ 20 ಸಾವಿರ ಕೋಟಿ ರೂ. ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ ಮಾಡುವ ಕಡತಕ್ಕೆ ಸಹಿ ಮಾಡಿದ್ದರು. ಅದರಂತೆ ಮಂಗಳವಾರ ಮೋದಿ ಅವರು ರೈತರ ಖಾತೆಗಳಿಗೆ ಹಣ ಜಮೆ ಮಾಡಿದ್ದಾರೆ.
ಹೀಗೆ ಚೆಕ್ ಮಾಡಿ
ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ, ಹಣ ನಿಮ್ಮ ಖಾತೆಗೆ ಜಮೆ ಆಗಿದೆಯೇ ಎನ್ನುವುದನ್ನು ಆನ್‌ಲೈನ್ ಮೂಲಕ ನಿಮಗೇ ಪರಿಶೀಲಿಸಲು ಸಾಧ್ಯವಿದೆ. ಅದಕ್ಕಾಗಿ ಮಾಡಬೇಕಾದುದು ಇಷ್ಟೆ.
ಅಧಿಕೃತ ವೆಬ್‌ಸೈಟ್ pmkisan.gov.in ಭೇಟಿ ನೀಡಿ
ಆಗ ಓಪನ್ ಆಗುವ ಪೇಜ್‌ನ ಬಲ ಬದಿಯಲ್ಲಿರುವ ‘Know Your Status’ ಆಯ್ಕೆ ಮೇಲೆ ಕ್ಲಿಕ್ ಮಾಡಿ
ರಿಜಿಸ್ಟ್ರೇಷನ್ ನಂಬರ್ ನಮೂದಿಸಿ, ಕ್ಯಾಪ್ಚ ಕೋಡ್ ಭರ್ತಿ ಮಾಡಿ ‘Get Data’ ಆಯ್ಕೆಯನ್ನು ಸೆಲೆಕ್ಟ್ ಮಾಡಿ
ಈಗ ಫಲಾನುಭವಿಯ ವಿವರ, ಹಣ ಜಮೆಯಾದ ಮಾಹಿತಿ ಸ್ಕ್ರೀನ್ ಮೇಲೆ ಮೂಡುತ್ತದೆ.
3 ಕಂತುಗಳಲ್ಲಿ ಪಾವತಿ
ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಕಂತುಗಳಲ್ಲಿ ಹಣವನ್ನು ಒದಗಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.