ನವದೆಹಲಿ: ಛತ್ತೀಸ್‌ಗಢ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ಚುನಾವಣಾ ಫಲಿತಾಂಶವು (Election Result 2023) ಭಾರತದ ಜನರು ಅತ್ಯುತ್ತಮ ಆಡಳಿತ (good governance) ಮತ್ತು ಅಭಿವೃದ್ಧಿಪರ (development) ಸ್ಥಿರವಾಗಿ ನಿಂತಿದ್ದಾರೆಂಬುದನ್ನು ಸೂಚಿಸುತ್ತದೆ.
ನಾನು ಜನತಾ ಜನಾರ್ದನನ ಮುಂದೆ ತಲೆ ಬಾಗುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.
ನಾಲ್ಕು ರಾಜ್ಯಗಳ ಪೈಕಿ ಛತ್ತೀಸ್‌ಗಢ, ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಜಯ ಸಾಧಿಸಿದರೆ, ತೆಲಂಗಾಣದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯ ಪ್ರದೇಶದ ರಾಜ್ಯಗಳ ಜನರಿಗೆ ಅವರ ಅಚಲ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ ಮತ್ತು ಅವರ ಯೋಗಕ್ಷೇಮಕ್ಕಾಗಿ ನಾವು ದಣಿವರಿಯಿಲ್ಲದೆ ಶ್ರಮಿಸುತ್ತೇವೆ ಎಂದು ಅವರಿಗೆ ಭರವಸೆ ನೀಡುತ್ತೇನೆ. ಶ್ರಮಿಸುತ್ತಿರುವ ಪಕ್ಷದ ಕಾರ್ಯಕರ್ತರಿಗೆ ವಿಶೇಷ ಧನ್ಯವಾದಗಳು.
ಪ್ರತಿಯೊಬ್ಬರೂ ಅನುಕರಣೀಯರು. ಅವರು ಅವಿರತವಾಗಿ ಕೆಲಸ ಮಾಡಿದ್ದಾರೆ ಮತ್ತು ನಮ್ಮ ಅಭಿವೃದ್ಧಿಯನ್ನು ಎತ್ತಿ ತೋರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇದೇ ವೇಳೆ, ಅವರು ತೆಲಂಗಾಣ ಜನರು ನೀಡಿದ ಬೆಂಬಲಕ್ಕೂ ಅಭಿನಂದನೆ ತಿಳಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿಗೆ ನೀಡಿದ ಬೆಂಬಲಕ್ಕಾಗಿ ತೆಲಂಗಾಣ ಸಹೋದರ ಮತ್ತು ಸಹೋದರಿಯರಿಗೆ ಧನ್ಯವಾದಗಳು. ಕಳೆದ ಕೆಲವು ವರ್ಷಗಳಿಂದ ಈ ಬೆಂಬಲ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ ಮತ್ತು ಈ ಟ್ರೆಂಡ್ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ. ತೆಲಂಗಾಣದ ಜತೆಗಿನ ನಮ್ಮ ಬಂಧ ಎಂದೂ ಮುರಿಯಲಾರದು ಮತ್ತು ತೆಲಂಗಾಣ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.
ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ ಎಂದ ರಾಹುಲ್; ಖರ್ಗೆ ಹೇಳಿದ್ದೇನು?
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶವು(Election Result 2023) ಕಾಂಗ್ರೆಸ್ ಪಕ್ಷದ (Congress Party) ಪಾಲಿಗೆ ಅಷ್ಟೇನೂ ಖುಷಿ ನೀಡಿಲ್ಲ. ತೆಲಂಗಾಣ (Telangana) ಹೊರತುಪಡಿಸಿದರೆ ರಾಜಸ್ಥಾನ(Rajasthan), ಛತ್ತೀಸ್‌ಗಢ (Chhattisgarh) ಮತ್ತು ಮಧ್ಯ ಪ್ರದೇಶದಲ್ಲಿ (Madhya Pradesh) ಸೋತಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಸೋಲು ಒಪ್ಪಿಕೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು, ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಅಲ್ಲದೇ, ಕಾಂಗ್ರೆಸ್ ಅಧಿಕಾರ ನೀಡಿರುವ ತೆಲಂಗಾಣದ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸೋಲು ತಾತ್ಕಾಲಿಕ ಎಂದು ಹೇಳಿದ್ದಾರೆ.
ನಾವು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಜನಾದೇಶವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇವೆ. ಆದರೆ, ನಮ್ಮ ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ. ತೆಲಂಗಾಣ ಜನತೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ತೆಲಂಗಾಣ ಪ್ರಜೆಗಳಿಗೆ ನೀಡಿರುವ ಭರವಸೆಯನ್ನು ನಾವು ಖಂಡಿತವಾಗಿಯೂ ಈಡೇರಿಸುತ್ತೇವೆ. ಅವರ ಶ್ರಮ ಮತ್ತು ಬೆಂಬಲಕ್ಕಾಗಿ ಎಲ್ಲಾ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ರಾಹುಲ್ ಗಾಂಧಿ ಅವರು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ನಮ್ಮ ಪ್ರದರ್ಶನ ನಿರಾಸೆ ಮಾಡಿದೆ. ಆದರೆ ಸಂಕಲ್ಪ ಮಾಡಿದ್ದೇವೆ. ಈ ಮೂರು ರಾಜ್ಯಗಳಲ್ಲಿ ನಮ್ಮನ್ನು ಪುನರ್ನಿರ್ಮಿಸಲು ಮತ್ತು ಪುನರುಜ್ಜೀವನಗೊಳಿಸುವ ನಮ್ಮ ಕೆಲಸವನ್ನು ಮಾಡುತ್ತೇವೆ. ಇದೊಂದು ತಾತ್ಕಾಲಿಕ ಹಿನ್ನಡೆ. ನಾವು ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.