ಕೋಲ್ಕೊತಾ: ಕೆಲವು ವಾರಗಳಿಂದ ಪಾಕ್ ಆಕ್ರಮಿತ ಕಾಶ್ಮೀರದ ಜನರು ಭಾರತದ ಜತೆ ವಿಲೀನವಾಗುವ ಬಯಕೆ ವ್ಯಕ್ತಪಡಿಸಿ ಹೋರಾಟ ನಡೆಸುತ್ತಿರುವ ಬೆಳವಣಿಗೆಯು ಲೋಕಸಭೆ ಚುನಾವಣಾ ಕಣದಲ್ಲಿ ಸದ್ದು ಮಾಡುತ್ತಿದ್ದು, ಪಶ್ಚಿಮ ಬಂಗಾಳದ ಸೆರಾಂಪೋರ್‌ನ ಚುನಾವಣಾ ಪ್ರಚಾರ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಿಒಕೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಚಾರ ಪ್ರಸ್ತಾಪಿಸಿ, ”ಪಿಒಕೆ ಎಂದೆಂದಿಗೂ ಭಾರತದ ಭೂಭಾಗ. ಮುಂಬರುವ ದಿನಗಳಲ್ಲಿ ನಾವು ಅದನ್ನು ಮರಳಿ ಪಡೆಯುತ್ತೇವೆ,” ಎಂದು ಹೇಳಿದರು.
”ಒಂದು ಕಾಲದಲ್ಲಿ ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಉಪಟಳ ತೀವ್ರವಾಗಿತ್ತು. ಉಗ್ರರ ಅಟ್ಟಹಾಸವೂ ಜೋರಾಗಿತ್ತು. ನಿತ್ಯವೂ ಪ್ರತಿಭಟನೆಗಳು ನಡೆಯುತ್ತಿದ್ದವು. ಕಲ್ಲುತೂರಾಟ ಸಾಮಾನ್ಯವಾಗಿತ್ತು.ಪ್ರಧಾನಿ ನರೇಂದ್ರ ಮೋದಿ ಸರಕಾರ 2019ರಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಣಿವೆಯಲ್ಲಿ ಭಯೋತ್ಪಾದನೆ ನಿಯಂತ್ರಣಕ್ಕೆ ಬಂದಿದೆ ಎಂದರು.
”ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಪಿಒಕೆ ಸಹವಾಸಕ್ಕೆ ಹೋಗಬೇಡಿ ಎಂದು ಮಣಿಶಂಕರ್ ಅಯ್ಯರ್ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ಬೆದರಿಕೆಯ ಮಾತುಗಳನ್ನಾಡುತ್ತಿದ್ದು, ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಪಿಒಕೆ ಭಾರತದ ಭೂ ಭಾಗವಾಗಿದ್ದು, ಮುಂಬರುವ ದಿನಗಳಲ್ಲಿ ನಾವು ಅದನ್ನು ಮರಳಿ ಪಡೆಯುವುದು ಶತಃಸಿದ್ಧ,” ಎಂದರು.
ಅಭಿವೃದ್ಧಿ ಚಟುವಟಿಕೆಗಳು ಹೆಚ್ಚಿವೆ. ಈಗ ನೆರೆಯ ಪಿಒಕೆಯಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಅಲ್ಲಿನ ಜನರಿಗೆ ತಡವಾಗಿಯಾದರೂ ಜ್ಞಾನೋದಯವಾಗಿದ್ದು ಭಾರತ ಸೇರುವ ಬಯಕೆ ವ್ಯಕ್ತಪಡಿಸುತ್ತಿದ್ದಾರೆ,” ಎಂದು ಹೇಳಿದರು.