ಬೆಳಗಾವಿ: ಮತದಾನೋತ್ತರ ಸಮೀಕ್ಷೆಗಳು ಸುಳ್ಳು ವರದಿಯನ್ನು ನೀಡಿ ತಮ್ಮ ಕ್ರೆಡಿಬಿಲಿಟಿ ಹಾಳುಮಾಡಿಕೊಂಡಿವೆ, ಮುಂದಿನ ದಿನಗಳಲ್ಲಿ ಜನ ಅವುಗಳನ್ನು ನಂಬುವ ಉಸಾಬರಿಗೆ ಹೋಗಲಾರರು ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಎಂದಿನಂತೆ ತಿಳಿನೀಲಿ ಬಣ್ಣದ ಅಂಗಿತೊಟ್ಟು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಸಮ್ಮಿಶ್ರ ಸರ್ಕಾರ ನಡೆಸುವ ಬಗ್ಗೆ ಯಾವುದೇ ಮಾಹಿತಿಯಿಲ್ಲ, ಎರಡು ದಿನಗಳಲ್ಲಿ ಅದು ಗೊತ್ತಾಗಲಿದೆ ಎಂದು ಹೇಳಿದರು. ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನದ ಬಗ್ಗೆ ಮಾತಾಡಿದ ಅವರು, ಅತಿಯಾದ ಆತ್ಮವಿಶ್ವಾಸ ಮತ್ತು ನಿರ್ಲಕ್ಷ್ಯದ ಪರಣಾಮವಾಗಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿಸಿದಷ್ಟು ಸ್ಥಾನ ಸಿಗಲಿಲ್ಲ ಎಂದರು.
ಕ್ಯಾಪ್ಟನ್ ಆದವರು ಸರಿಯಾದ ಸಲಹೆ ಸೂಚನೆಗಳನ್ನು ನೀಡದೆ ಹೋಗಿದ್ದು ಮತ್ತೊಂದು ಕಾರಣವಾಗಿದೆ, ಗಮನಿಸಬೇಕಾದ ಸಂಗತಿಯೆಂದರೆ ಐದಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಹಳ ಕಡಿಮೆ ಅಂತರದಲ್ಲಿ ಸೋತಿದ್ದಾರೆ ಎಂದರು. ಸಂಪುಟ ವಿಸ್ತರಣೆ ಮತ್ತು ಕೆಲ ಮಂತ್ರಿಗಳನ್ನು ಡ್ರಾಪ್ ಮಾಡಿ ಹೊಸಬರನ್ನು ಸೇರಿಸಿಕೊಳ್ಳುವ ಸಾಧ್ಯತೆಯನ್ನು ಸತೀಶ್ ಜಾರಕಿಹೊಳಿ ತಳ್ಳಿಹಾಕಿದರು.
ಕ್ಷೇತ್ರಗಳ ಜವಾಬ್ದಾರಿ ವಹಿಸಿಕೊಂಡಿದ್ದವರು ಸ್ವಲ್ಪ ಹೆಚ್ಚಿನ ಎಫರ್ಟ್ ಹಾಕಿದ್ದರೆ ಇನ್ನೂ 4-5 ಸ್ಥಾನ ಸಿಗುತ್ತಿದ್ದವು ಎಂದು ಹೇಳಿ ಸೋಲಿಗೆ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ದೂರಿದರು.