ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್ ಸೋಂಕು ತಡೆಯಲು ಜಿಲ್ಲಾಡಳಿತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಸೋಂಕು ತಗುಲಿದವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸುವಂತೆ ಸೂಚಿಸಿದೆ.
ಈವರೆಗೆ ಸೋಂಕಿತರು ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕುಟುಂಬ ಸದಸ್ಯರು ಒಟ್ಟಿಗೆ ಇರುವುದರಿಂದ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂಶಯ ವ್ಯಕ್ತವಾಗಿತ್ತು.
ಇದನ್ನು ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಸೋಂಕು ತಡೆಗಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಕುಟುಂಬ ಸದಸ್ಯರಿಂದ ಬೇರ್ಪಡಿಸಿ ಚಿಕಿತ್ಸೆ ನೀಡಿದರೆ ಸೋಂಕು ನಿಯಂತ್ರಣಕ್ಕೆ ಬರಬಹುದು ಎಂದು ಚಿಂತಿಸಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಸಿಸಿ ಕೇಂದ್ರಗಳಿಗೆ ದಾಖಲಾಗಬೇಕು ಎಂದು ಸೂಚಿಸಿದ್ದರು.
ಹೀಗಾಗಿ ಜಿಲ್ಲಾಡಳಿತ ಅಂತಹ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲು ನಿರ್ಧರಿಸಿದೆ.
ಹೀಗಾಗಿ ಆಯಾ ಉಪವಿಭಾಗಾಧಿಕಾರಿಗಳು ಎಲ್ಲ ಸ್ಥಳೀಯ ಸಂಸ್ಥೆ, ಗ್ರಾಪಂ ಆಡಳಿತಕ್ಕೆ ಸೂಚನೆ ನೀಡಿದ್ದು ಕೂಡಲೇ ಕೋವಿಡ್ ಪಾಸಿಟಿವ್ ಹೊಂದಿದ ವ್ಯಕ್ತಿಗಳನ್ನು 108 ವಾಹನದ ಸಹಾಯದಿಂದ ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸುವ ವ್ಯವಸ್ಥೆ ಮಾಡಿ ತಮ್ಮ ಕಚೇರಿಗೆ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿದ್ದಾರೆ.