ಹುಬ್ಬಳ್ಳಿ: ಸೋಲಿನ ಭೀತಿಯಿಂದ ಸಿದ್ದರಾಮಯ್ಯ ರಾಜಕೀಯ ನಿವೃತ್ತಿಯ ಮಾತನಾಡುತ್ತಿದ್ದಾರೆ. ಅಮಿತ್ ಶಾ ಸತ್ಯ ಹೇಳಿದ್ರೆ ರಾಜಕೀಯ ನಿವೃತ್ತಿ ಪಡೆಯೋದಾಗಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರಿಗೆ ಸೋಲಿನಭೀತಿ ಎದುರಾಗಿದೆ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಬರ ಪರಿಹಾರದ ವಿಚಾರದಲ್ಲಿ ವಿನಾಕಾರಣ ಕಾಂಗ್ರೆಸ್ ಆರೋಪ ಮಾಡ್ತಿದೆ. ಕಾಂಗ್ರೆಸ್ ಪಕ್ಷ ಸದಾಕಾಲ ಸುಳ್ಳು ಹೇಳುತ್ತಲೇ ಬಂದಿದೆ ಎಂದರು.
“ಸುಮಲತಾ ಅವರ ಸಮಸ್ಯೆ ಸುಖಾಂತ್ಯವಾಗುತ್ತೆ ಅಂತ ಹಿಂದೆಯೂ ಹೇಳಿದ್ದೆ. ಅದರಂತೆಯೇ ಸುಮಲತಾ ಪ್ರಕರಣ ಸುಖಾಂತ್ಯವಾಗಿದೆ. ಹಿಂದೆ ಬಿಜೆಪಿ ಗೆ ಪೂರ್ಣ ಬಹುಮತವಿದ್ದಾಗಲೂ, ಅವರು ನಮ್ಮನ್ನು ಬೆಂಬಲಿಸಿದ್ದು, ಸಂಸತ್ತಿನಲ್ಲಿ ಮತದಾನ ವಿಚಾರ ಬಂದಾಗ ಸುಮಲತಾ ನಮ್ಮನ್ನು ಬೆಂಬಲಿಸಿದ್ದಾರೆ’’ ಎಂದು ಅವರು ಹೇಳಿದರು. ಈಗ ನಮ್ಮ ಪಕ್ಷ ಸೇರ್ಪಡೆಗೊಂಡಿದ್ದಾರೆ. ಅವರು ಏನು ಕಂಡೀಶನ್ ಹಾಕಿದ್ದಾರೋ ಗೊತ್ತಿಲ್ಲ. ಸಂಬಂಧಿಸಿದವರ ಜೊತೆ ಅವರು ಮಾತನಾಡಿದ್ದಾರೆ.
“ಮೋದಿಯವರನ್ನು ದೇಶದ ಜನ ಈಗಾಗಲೇ ಸ್ವೀಕಾರ ಮಾಡಿದ್ದಾರೆ. ಆದ್ರೆ ಕಾಂಗ್ರೆಸ್ ನವರು ಕ್ಷುಲ್ಲಕವಾಗಿ ಮಾತನಾಡುತ್ತಿದ್ದಾರೆ. ಜನ ಕಾಂಗ್ರೆಸ್ ನವರನ್ನ ತಿರಸ್ಕಾರ ಮಾಡೋದು ಖಚಿತ” ಎಂದ ಅವರು, “ಸುಮಲತಾ ಬಿಜೆಪಿ ಸೇರ್ಪಡೆ ಒಳ್ಳೆಯ ವಿಚಾರ. ಅವರಿಗೆ ಅಭಿನಂದನೆ ಹೇಳ್ತೇನೆ” ಎಂದು ಹೇಳಿದರು.
“ಎನ್ ಡಿ ಆರ್ ಎಫ್ ನಲ್ಲಿ 75 ಪರ್ಸೆಂಟ್ ದುಡ್ಡು ಕೊಡುತ್ತೇವೆ. ಇವರು ಹೇಗೆ ಖರ್ಚು ಮಾಡ್ತಾರೋ ಹಾಗೆ ದುಡ್ಡು ಕೊಡ್ತಾ ಹೋಗ್ತಿವಿ. ಹಿಂದೆ ಯಡಿಯೂರಪ್ಪ ಸರ್ಕಾರವಿದ್ದಾಗಲು ಮನೆ ಬಿದ್ದವರಿಗೆ 5 ಲಕ್ಷ, ಎಕೆರೆಗೆ 5 ಸಾವಿರ ಪರಿಹಾರ ನೀಡಿದ್ದೆವು. ಆದ್ರೆ ಕಾಂಗ್ರೆಸ್ ಸರ್ಕಾರ ಯಾಕೆ ಬರಪರಿಹಾರ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ..? ನೀತಿ ಸಂಹಿತೆ ಮುಗಿದ ನಂತರ ಎಲ್ಲ ವಿಚಾರದ ಕುರಿತು ಸ್ಪಷ್ಟಪಡಿಸುತ್ತೇವೆ” ಎಂದು ಅವರು ಹೇಳಿದರು.