ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಬರೀ ಉಡಾಫೆ ಮಾತಾಡ್ತಾರೆ. ಅವರಿಗೆ ಮಾನ, ಮರ್ಯಾದೆಯೇ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ಈ ಮೂಲಕ ಪ್ರಧಾನಿ ಮೋದಿ ಅವರಿಗೆ ಎರಡು ನಾಲಿಗೆ ಎಂದಿರುವ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ನಿಮಗೆ ಎಷ್ಟು ನಾಲಿಗೆ ಇದೆ. ನಿಮ್ಮ ನಾಲಿಗೆ ಎಂಥದ್ದು ಎಂಬುದು ಇಡೀ ನಾಡಿಗೇ ಗೊತ್ತಿದ್ದು, ಲಘುವಾಗಿ ಮಾತನಾಡುವುದು ನಿಮ್ಮ ಮತ್ತು ಕಾಂಗ್ರೆಸ್ ಸಂಸ್ಕೃತಿ. ಸಂವಿಧಾನದಲ್ಲಿ ಮತ ಪಡೆದ ವ್ಯಕ್ತಿಗೆ ನಿಮ್ಮಂತೆಯೇ ಘನತೆ, ಗೌರವ ಇರುತ್ತದೆ ಎಂದರು.
ಅದನ್ನರಿತು ಮಾತನಾಡಿ. ನಿಮಗೆ ಅಧಿಕಾರದ ಪವರ್ ತುಸು ಹೆಚ್ಚಿರಬಹುದು. ಆದರೆ, ಒಬ್ಬ ಸಿಎಂ ಮತ್ತು ಕೇಂದ್ರ ಸರ್ಕಾರದ ಮಂತ್ರಿ ಇಬ್ಬರೂ ಸಮಾನರು. ಸ್ವಲ್ಪ ಅಳೆದು – ತೂಗಿ ಮಾತನಾಡಿ ಎಂದು ತಿರುಗೇಟು ನೀಡಿದರು.ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಜೋಶಿ ಆರೋಪಿಸಿದರು.