ಚಿಕ್ಕೋಡಿ: ಲೋಕಸಭೆ ಚುನಾವಣೆ ಕಲವೇ ತಿಂಗಳು ಬಾಕಿ ಉಳಿದಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷದಲ್ಲಿ ಟಿಕೆಟ್ ವಿಚಾರವಾಗಿ ಸಾಕಷ್ಟು ಹಗ್ಗಜಗ್ಗಾಟ ನಡೆಯುತ್ತಿದೆ. ರಾಜ್ಯ ರಾಜಕೀಯ ಪವರ್ ಸೆಂಟರ್ ಆಗಿರುವ ಬೆಳಗಾವಿ ಮತ್ತು ಚಿಕ್ಕೋಡಿ ಎರಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಲಿದೆ ಎಂಬುವುದು ಗೊಂದಲ ಗೂಡಾಗಿದೆ. ಈ ಮಧ್ಯೆ ಲೋಕಸಭೆ ಚುನಾವಣೆಗೆ ನಾನು, ನನ್ನ ಪುತ್ರ ಸ್ಪರ್ಧಿಸಲ್ಲ ಎಂದು ಪ್ರಕಾಶ್ ಹುಕ್ಕೇರಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಚಿಕ್ಕೋಡಿ ಟಿಕೆಟ್ ಕುರುಬ ಸಮುದಾಯಕ್ಕೆ ನೀಡಿದರೇ ಗೆಲ್ಲಿಸಿಕೊಂಡು ಬರುತ್ತೇವೆ.2014ರಲ್ಲಿ ಮಂತ್ರಿ ಆಗಿದ್ದರೂ ಮುಖ್ಯಮಂತ್ರಿಗಳ ಸೂಚನೆಯಂತೆ ಲೋಕಸಭೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದೆ. ಆಗ ಗಣೇಶ್ ಹುಕ್ಕೇರಿ ಅವರನ್ನು ಮಂತ್ರಿ ಮಾಡುತ್ತೇವೆ ಅಂತ ಭರವಸೆ ಕೊಟ್ಡಿದ್ದರು. ಆದರೆ ಈಗ ಪುತ್ರ ಗಣೇಶ್ ಶಾಸಕನಾಗಿ ಆಯ್ಕೆಯಾದರೂ ಮಂತ್ರಿ ಮಾಡಲಿಲ್ಲ. ನಾನಾಗಲಿ, ನನ್ನ ಮಗನಾಗಲಿ ಮಂತ್ರಿ ಸ್ಥಾನ ಕೇಳಿಲ್ಲ, ಕೇಳೋದು ಇಲ್ಲ ಎಂದು ಹೇಳಿದರು.
ಈಗ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಒತ್ತಡ ಬರುತ್ತಿದ್ದು, ನಾನು ಸ್ಪರ್ಧಿಸಿದರೇ ಚಿಕ್ಕೋಡಿ ಕ್ಷೇತ್ರ ಗೆಲ್ಲುತ್ತೇವೆ ಅಂತ ಲೆಕ್ಕಾಚಾರವಿದೆ. ಆದರೆ ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಚಿಕ್ಕೋಡಿ ಲೋಕಸಭೆಯಲ್ಲಿ 3 ಲಕ್ಷ ಕುರುಬ ಸಮುದಾಯದರು ಇದ್ದಾರೆ. ಕುರುಬ ಸಮುದಾಯದ ಲಕ್ಷ್ಮಣ ರಾವ್ ಚಿಂಗಳೆಗೆ ‘ಕೈ’ ಟಿಕೆಟ್ ಕೊಡಿ. ನಾವೆಲ್ಲರೂ ಸೇರಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ ಎಂದರು.
ಎಂಎಲ್ಸಿ ಆಗಿಯೇ ಮುಂದುವರಿಯುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮುಖ್ಯಮಂತ್ರಿಗಳು, ಹೈಕಮಾಂಡ್ ಹೇಳಿದರೂ ಸಹ ನಾನು ಸ್ಪರ್ಧಿಸುವುದಿಲ್ಲ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರು ಕಳೆದ ಕೆಲ ದಿನಗಳ ಹಿಂದೆಯೇ ಸ್ಪಷ್ಟಪಡಿಸಿದ್ದರು. ಆದರೆ ಪುತ್ರನ ಸ್ಪರ್ಧೆ ವಿಚಾರವಾಗಿ ಯಾವುದೇ ಸುಳಿವು ನೀಡಿರಲಿಲ್ಲ. ಇದೀಗ ಪುತ್ರನು ಸ್ಪರ್ಧಿಸುವುದಿಲ್ಲ ಎಂದು ವಿವರಿಸಿದರು.