ನವದೆಹಲಿ: ಕಳೆದ 10 ವರ್ಷಗಳಲ್ಲಿ ಭಾರತೀಯ ಜನತಾ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಎಲ್ಲ ಅಂಶಗಳನ್ನು ಜಾರಿಗೆ ತರುವ ಮೂಲಕ ಪ್ರಣಾಳಿಕೆಯ ಪಾವಿತ್ರ್ಯತೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕಳೆದ 10 ವರ್ಷಗಳಲ್ಲಿ ನಮ್ಮ ಪ್ರಣಾಳಿಕೆಯಲ್ಲಿದ್ದ ಗ್ಯಾರಂಟಿಯ ರೀತಿಯಲ್ಲಿ ಜಾರಿಗೆ ತರಲಾಗಿದೆ. ಈ ಮೂಲಕ ಪ್ರಣಾಳಿಕೆಯ ಪಾವಿತ್ರ್ಯತೆಯನ್ನು ಹೆಚ್ಚಿಸಲಾಗಿದೆ ಎಂದರು.
ಜಾಗತಿಕ ಸಮುದಾಯ ಯುದ್ಧ, ಹಣದುಬ್ಬರ ಮುಂತಾದ ಅನಿಶ್ಚಿತತೆಯಿಂದ ಹೊಯ್ದಾಡುತ್ತಿರುವ ಸಮುಯದಲ್ಲಿ ಸ್ಥಿರ ಸರ್ಕಾರವನ್ನು ಜನತೆ ಆರಿಸುವುದು ಅತ್ಯಂತ ಅಗತ್ಯವಾಗಿರುತ್ತದೆ’ ಎಂದು ಜನತೆಗೆ ಕರೆ ನೀಡಿದರು.
ಇದೇ ವೇಳೆ ಜೂ.4ರಂದು ಫಲಿತಾಂಶ ಪ್ರಕಟವಾದ ಮರುಕ್ಷಣದಿಂದಲೇ ಸಂಕಲ್ಪ ಪತ್ರದಲ್ಲಿನ ಭರವಸೆಗಳ ಈಡೇರಿಕೆಗೆ ಶ್ರಮಿಸುವುದಾಗಿ ತಿಳಿಸಿದ ಪ್ರಧಾನಿ, ಮುಂದಿನ ಚುನಾವಣೆಯ ಒಳಗೆ ಒಂದು ದೇಶ ಒಂದು ಚುನಾವಣೆ ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ರಾಷ್ಟ್ರದ ಹಿತದೃಷ್ಟಿಯಿಂದ ಮೊದಲ ಆದ್ಯತೆಯಾಗಿ ಪರಿಗಣಿಸಲಾಗುವುದು ಎಂದು ಸೂಚಿಸಿದರು.