ವಿಜಯನಗರ: ಪ್ರಧಾನಿ ನರೇಂದ್ರ ಮೋದಿ ಈ ಚುನಾವಣೆಯಲ್ಲಿ ಹತಾಷರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರ ದ ವ್ಯಾಪ್ತಿಯ ಕೂಡ್ಲಿಗಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿಯವರು ಸರ್ವೇ ಪ್ರಕಾರ 200 – 220 ಗೆಲ್ಲಲಿದ್ದು, ಆ್ಯಕ್ಸಿಸ್ ಮೈ ಇಂಡಿಯಾ ಸರ್ವೇನಲ್ಲಿ 210 ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ಪ್ರಕಟಿಸಿದ್ದರು. ಇದನ್ನು ಮೋದಿ ಆನಂತರ ಡಿಲೇಟ್ ಮಾಡಿಸಿದ್ದಾರೆ. ಈ ವಿಷಯ ಜನರಿಗೆ ಗೊತ್ತಾದರೆ ವೋಟ್ ಹಾಕಲ್ಲ ಅಂತ ಹೀಗೆ ಮಾಡಿಸಿದ್ದಾರೆ ಎಂದು ಟೀಕಿಸಿದರು.
ಅವರು ಎಲ್ಲ ಕಡೆ ಸುಳ್ಳು ಹೇಳುತ್ತಿದಾರೆ. ಶಿವಾಜಿ, ಕಿತ್ತೂರು ರಾಣಿ ಚೆನ್ನಮ್ಮ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿದ್ದಾರೆ ಅಂತಾರೆ, ಆದರೆ, ಕಾಂಗ್ರೆಸ್ ಈ ಮಹನೀಯರ ಬಗ್ಗೆ ಅವಮಾನ ಮಾಡುವ ಕೆಲಸ ಮಾಡಿಲ್ಲ. ಕಿತ್ತೂರು ರಾಣಿ ಜಯಂತಿ ಆಚರಣೆ ಮಾಡಿದ್ದು ನಾನೆ. ಹಿಂದುಳಿದ, ದಲಿತ ಮೀಸಲಾತಿಯನ್ನು ಮುಸ್ಲಿಂರಿಗೆ ಕೊಡುತ್ತಾರೆ ಅಂತ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಮೀಸಲಾತಿ ಪರವಾಗಿಲ್ಲ, ಎಲ್ಲ ಕಾಲದಲ್ಲಿ ಮೀಸಲಾತಿ ವಿರೋಧಿಸಿದ್ದಾರೆ. ಸಂವಿಧಾನವನ್ನೇ ಬಿಜೆಪಿ ವಿರೋಧಿಸಿದ್ದಾರೆ ಎಂದು ದೂರಿದರು.
ಮತದಾನ ಮಾಡುವ ಮುನ್ನ ಮೋದಿ ಏನು ಕೆಲಸ ಮಾಡಿದ್ದಾರೆ?, ಹತ್ತು ವರ್ಷ ಏನು ಕೆಲಸ ಮಾಡಿದ್ದಾರೆ ಅನ್ನುವುದು ಪರಿಶೀಲನೆ ಮಾಡಿ. ನುಡಿದಂತೆ ನಡೆದಿದ್ದೀರಾ? ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಾ?, ದೇಶ ರಕ್ಷಣೆ ಮಾಡೋದು ಮೋದಿ ಅಂತೇಳಿ ಕಳೆದ ಬಾರಿ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಅಂತ ಯಾವ ವಿಷಯಗಳಿಲ್ಲ ಎಂದು ಹೇಳಿದರು.