ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ. ಏಪ್ರಿಲ್ 19 ಅಥವಾ 20ರಂದು ಪ್ರಧಾನಿ ನರೇಂದ್ರ ಮೋದಿ ರಾಮನಗರಕ್ಕೆ ಆಗಮಿಸಿ ಬೃಹತ್ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದೇ ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಕೂಡ ಮೋದಿ ಜೊತೆ ವೇದಿಕೆ ಹಂಚಿಕೊಳ್ಳುವ ನೀರಿಕ್ಷೆ ಇದೆ.
ರಾಮನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೃಹತ್ ಚುನಾವಣಾ ಪ್ರಚಾರ ಸಮಾವೇಶ ನಡೆಸುವ ಬಗ್ಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕೋರ್ ಕಮಿಟಿ, ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿದೆ. ಇದರಂತೆ, ಸಮಾವೇಶ ರಾಮನಗರದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ.
ಲೋಕಸಭೆ ಚುನಾವಣೆ ಪ್ರಚಾರ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಮುಂದಿನ ಭಾನುವಾರ, ಏಪ್ರಿಲ್ 14 ರಂದು ಮಂಗಳೂರು ಮತ್ತು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಮೊದಲಿಗೆ ಮಂಗಳೂರಿಗೆ ಭೇಟಿ ನೀಡಲಿರುವ ಮೋದಿ, ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ಮತಯಾಚನೆ ನಡೆಸಲಿದ್ದಾರೆ. ನಂತರ ಬೆಂಗಳೂರಿಗೆ ಬರಲಿರುವ ಅವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ರೋಡ್ ಶೋ ನಡೆಸಿ ಮತಯಾಚನೆ ನಡೆಸಲಿದ್ದಾರೆ.
ರಾಮನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಭರ್ಜರಿ ಸಮಾವೇಶ ಆಯೋಜಿಸುವ ಮೂಲಕ ಬಿಜೆಪಿ ಜೆಡಿಎಸ್ ಮೈತ್ರಿಯ ಒಗ್ಗಟ್ಟಿನ ಸಂದೇಶ ಸಾರುವುದು ಉಭಯ ಪಕ್ಷಗಳ ನಾಯಕರ ಯೋಜನೆಯಾಗಿದೆ. ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಉಭಯ ಪಕ್ಷಗಳ ನಾಯಕರ ವೇದಿಕೆ ಹಂಚಿಕೊಂಡು ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಸ್ಪಷ್ಟ ಸಂದೇಶ ನೀಡಲು ಚಿಂತನೆ ನಡೆಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿದ್ದು ಬೆಳಕಿಗೆ ಬಂದಿದೆ.