ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮಿನಗಡದ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ನಸುಕಿನ ಜಾವ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಗುಡೂರ ಗ್ರಾಮದ ಸಂಗಮೇಶ ಶರಣಯ್ಯ ಮಠಪತಿ (25) ಮೃತ ಯುವಕ. ಈತನು ಪತ್ರಿಕೆ ಸರಬರಾಜು ಮಾಡುತ್ತಿದ್ದನು ಎನ್ನಲಾಗಿದ್ದು, ಅಮೀನಗಡದಿಂದ ಗುಡೂರ ಮಾರ್ಗದತ್ತ ಸಾಗುವ ಗ್ರಾಮಗಳಿಗೆ ದಿನಪತ್ರಿಕೆಗಳನ್ನು ಸರಬರಾಜು ಮಾಡುವ ಕಾರ್ಯ ಮಾಡುತ್ತಿದ್ದನು.
ಎಂದಿನಂತೆ ಮಂಗಳವಾರ ನಸುಕಿನ ಜಾವ 5 ಗಂಟೆಗೆ ಪತ್ರಿಕೆಗಳ ಬಂಡಲ್ ಗಳನ್ನು ಬೈಕ್ ನಲ್ಲಿ ತೆಗೆದುಕೊಂಡು ಇನ್ನೇನು ಸೂಳೆಭಾವಿ ಕ್ರಾಸ್ ದಾಟಬೇಕೆನ್ನುವಷ್ಟರಲ್ಲಿ ಇಳಕಲ್ ಮಾರ್ಗದಿಂದ ಬಾಗಲಕೋಟೆಯತ್ತ ಹೊರಟಿದ್ದ ಖಾಸಗಿ ಟ್ರಾವೆಲ್ ವಾಹನ ಬಡಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಡಿಕ್ಕಿ ರಭಸಕ್ಕೆ ಬೈಕ್ ಅಣತಿ ದೂರ ಟ್ರಾವೆಲ್ ವಾಹನದೊಂದಿಗೆ ಸಾಗಿತ್ತು. ಬೈಕ್ ನಲ್ಲಿದ ದಿನಪತ್ರಿಕೆಗಳೆಲ್ಲ ರಸ್ತೆಯಲ್ಲೆಲ್ಲ ಚಲ್ಲಾಪಿಲ್ಲಿಯಾಗಿದ್ದವು. ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಠಾಣೆ ಎದುರಿಗೆ ಈ ಘಟನೆ ನಡೆದಿದ್ದು ಅಪಘಾತದ ದೃಶ್ಯ ಅಲ್ಲಿನ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.