ಕಲಬುರಗಿ: ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರೈತರಿಗೆ ಬರ ಪರಿಹಾರ ನೀಡದೆ ಕೇವಲ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಕಲಬುರಗಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬರ ಪರಿಹಾರಕ್ಕೆ ರಾಜ್ಯ ಸರಕಾರ ಮೂರು ತಿಂಗಳು ತಡವಾಗಿ ಮನವಿ ಸಲ್ಲಿಸಿದೆ ಎಂದು ಬರದ ಪರಿಹಾರದಲ್ಲೂ ಸುಳ್ಳಿನ ರಾಜಕೀಯ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.
ಕೇಂದ್ರದ ಬಿಜೆಪಿ ಸರಕಾರ 2020ರಲ್ಲಿ ಮಾಡಿರುವ ಎನ್‌ಡಿಆರ್‌ಎಫ್ ಮಾ ರ್ಗಸೂಚಿಯಂತೆ ಮುಂಗಾರು ಬರ ಘೋಷಣೆ ರಾಜ್ಯ ಸರಕಾರದ ನೊಟೀಫಿಕೇಷನ್ ಮುಖಾಂತರ ಅಕ್ಟೋಬರ್ 31ಕ್ಕಿಂತ ಮೊದಲು ಮತ್ತು ಹಿಂಗಾರು ಬರ ಘೋಷಣೆ ಮಾರ್ಚ್ 31ರ ಒಳಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
“ನಾವು ಯಾವುದೇ ಪತ್ರ ಬರೆದಿಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಸುಳ್ಳು ಹೇಳುವುದು ಯಾಕೆ? ನಾವು ಯಾವುದೇ ಪತ್ರ ಬರೆದು ಮನವಿ ಮಾಡದಿದ್ದರೆ ಕೇಂದ್ರ ಅಧಿಕಾರಿಗಳು ಬಂದು ಬರ ಪರಿಶೀಲನೆ ಮಾಡಿರುವುದು ಹೇಗೆ? ಎಂದು ಅವರು ಉತ್ತರಿಸಲಿ,” ಎಂಬುದಾಗಿ ಸಚಿವರು ಸವಾಲೆಸೆದರು.
ಅದರಂತೆ ರಾಜ್ಯದಲ್ಲಿ 2023ರ ಸೆಪ್ಟೆಂಬರ್ ತಿಂಗಳಲ್ಲಿ 211 ತಾಲೂಕು ಬರ ಘೋಷಣೆ ಮಾಡಿ ಸೆಪ್ಟೆಂಬರ್ 23ರಂದೇ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಅದರ ನಂತರ ಸೆಪ್ಟೆಂಬರ್ 27ರಂದು ಕೇಂದ್ರ ಸರಕಾರದಿಂದ ಅಕ್ಟೋಬರ್ 5ರಿಂದ ಕೇಂದ್ರದ ತಂಡ ಬಂದು ಪರಿಶೀಲನೆ ನಡೆಸಲಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿತ್ತು ಎಂದು ಪ್ರಿಯಾಂಕ್ ಖರ್ಗೆ ವಿವರ ನೀಡಿದರು.