ನವದೆಹಲಿ: ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಹಿಳೆಯ ಮೇಲೆ ಯಾವುದೇ ದೌರ್ಜನ್ಯ ನಡೆದರೆ ಆಕೆಯೊಂದಿಗೆ ನಾನು ನಿಲ್ಲುವುದಾಗಿ ತಿಳಿಸಿದರು.
“ಯಾವುದೇ ಮಹಿಳೆಗೆ ಎಲ್ಲಿಯಾದರೂ ಯಾವುದೇ ದೌರ್ಜನ್ಯ ನಡೆದರೆ, ನಾವು ಮಹಿಳೆಯೊಂದಿಗೆ ನಿಲ್ಲುತ್ತೇವೆ. ನಾನು ಯಾವಾಗಲೂ ಮಹಿಳೆಯರ ಪರವಾಗಿ ನಿಲ್ಲುತ್ತೇನೆ. ಅವರು ಯಾವ ಪಕ್ಷದವರಾಗಿದ್ದರೂ ಅದು ಗಣನೆಗೆ ಬರುವುದಿಲ್ಲ. ಈ ಪ್ರಕರಣದ ಕುರಿತು ಆಪ್ ತಮ್ಮ ನಡುವೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಎಂಬುದು ಅವರಿಗೆ ಬಿಟ್ಟದ್ದು” ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು‘
ತಪ್ಪಿತಸ್ಥರ ವಿರುದ್ಧ ಅರವಿಂದ್ ಕೇಜ್ರಿವಾಲ್ ಅವರು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆಮ್ ಆದ್ಮಿ ಪಕ್ಷದ ಪರವಾಗಿ ಹೇಳಿಕೆ ನೀಡಿದ್ದರು. ಸ್ವಾತಿ ಮಲಿವಾಲ್ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಸಿಎಂ ನಿವಾಸಕ್ಕೆ ಬಂದಿದ್ದರು. ಅವರು ಕೇಜ್ರಿವಾಲ್‌ಗಾಗಿ ಡ್ರಾಯಿಂಗ್ ರೂಮ್‌ನಲ್ಲಿ ಕಾಯುತ್ತಿದ್ದಾಗ, ಬಿಭವ್ ಕುಮಾರ್ ಅಲ್ಲಿಗೆ ಆಗಮಿಸಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸಂಜಯ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಜ್ಯಸಭಾ ಸದಸ್ಯೆ ಮತ್ತು ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮೇಲೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಹಲ್ಲೆ ನಡೆಸಿದ್ದರು. ಸ್ವಾತಿ ಮಲಿವಾಲ್ ಅವರು ಈ ಕುರಿತು ದೆಹಲಿಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಹೋಗಿದ್ದರು. ಸಿಎಂ ನಿವಾಸದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಪಿಎ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.