ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಇಳಕಲ್ ತಾಲೂಕಿನ ಸುಕ್ಷೇತ್ರ ಸಿದ್ದನಕೊಳ್ಳದಿಂದ ಪ್ರತಿವರ್ಷ ಕೊಡಮಾಡುವ ಸಿದ್ದಶ್ರೀ ರಾಷ್ಟಿçÃಯ ಪ್ರಶಸ್ತಿಗೆ ಈ ಬಾರಿ ಖ್ಯಾತ ಬಹುಭಾಷಾ ಚಿತ್ರ ನಿರ್ಮಾಪಕ ಆರ್.ವಿ.ಗುರುಪಾದಮ್ ಆಯ್ಕೆ ಆಗಿದ್ದಾರೆ.
ಆಯ್ಕೆ ಕುರಿತು ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಲ್ಲಿನ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮೀಜಿ ಈ ವಿಷಯ ತಿಳಿಸಿದರು. ೨೦೧೫ರಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು ಪ್ರಥಮ ಬಾರಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈವರೆಗೆ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರವಾಗಿ, ಮೋಹನ್ ಆಳ್ವಾ, ಉಮೇಶ ಪುರಾಣಿಕಮಠ, ಮಹೇಶ ಜೋಶಿ ಹಾಗೂ ಮಧುಶ್ರೀ ಭಟ್ಟಾಚಾರ್ಯ ಅವರಿಗೆ ಪ್ರಶಸ್ತಿ ನೀಡಲಾಗಿದೆ ಎಂದರು.
೭ನೇ ಸಿದ್ದಶ್ರೀ ರಾಷ್ಟಿಯ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿ ಹಿರಿಯ ಕಲಾವಿದರನ್ನು ಉನ್ನತಮಟ್ಟಕ್ಕೆ ಕೊಂಡೊಯ್ದು ಚಿತ್ರರಂಗದ ೧೦ ಜನ ಮೇರು ನಿರ್ಮಾಪಕರ ಸಾಲಿನಲ್ಲಿ ೭ನೇ ಸ್ಥಾನವನ್ನು ಅಲಂಕರಿಸಿ ಆರ್.ವಿ.ಗುರುಪಾದಮ್ ಅವರು ಹುಬ್ಬಳ್ಳಿ ಮೂಲದವರು ಎಂಬುದಕ್ಕೆ ಹೆಮ್ಮೆ ಎನಿಸಿದೆ. ಜ.೧೬ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಘೋಷಿಸಿದರು.
ಈಗಾಗಲೆ ವಿವಿಧ ಭಾಷೆಯ ೨೭ ಚಿತ್ರಗಳನ್ನು ನಿರ್ಮಿಸಿರುವ ಗುರುಪಾದಮ್ ಅವರು ತೆಲುಗು, ತಮಿಳು, ಕನ್ನಡ, ಮಳಯಾಲಂ, ಹಿಂದಿ, ಗುಜರಾತಿ ಭಾಷೆಯಲ್ಲಿ ಚಿತ್ರ ನಿರ್ಮಿಸಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಕನ್ನಡದಲ್ಲಿ ವಿಷ್ಣುವರ್ಧನ ಹಾಗೂ ಆರತಿ ಅಭಿನಯದ ನಾನಿರುವುದೇ ನಿನಗಾಗಿ ಹಾಗೂ ಅಂಬರೀಶ ಮತ್ತು ಅಂಬಿಕಾ ಅಭಿನಯದ ಚದುರಂಗ ಚಿತ್ರ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.
ಸಿದ್ಧಶ್ರೀ ಪ್ರಶಸ್ತಿಯು ಪ್ರಶಸ್ತಿಪತ್ರ ಹಾಗೂ ೨೫ ಸಾವಿರ ರೂ.ನಗದು ಹೊಂದಿದೆ. ಈಗಾಗಲೆ ಗುರುಪಾದಮ್ ಅವರಿಗೆ ವಿಷಯ ತಿಳಿಸಲಾಗಿದ್ದು ಜ.೧೬ರಂದು ಶ್ರೀಮಠಕ್ಕೆ ಆಗಮಿಸಿ ಪ್ರಶಸ್ತಿ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ನಬಿ ನದಾಫ್, ಮಹಾಂತೇಶ ಹಳ್ಳೂರ, ಹುಲ್ಲಪ್ಪ ಹಳ್ಳೂರ, ವೆಂಕಟೇಶ.ಎA.ವಿ., ಸಂಗಮೇಶ ಹುದ್ದಾರ, ಈರಪ್ಪ ಕಡೇಮನಿ, ಮಲ್ಲಪ್ಪ ಅಮಾಜಿ ಇತರರು ಇದ್ದರು.
ಸರಳ ರಥೋತ್ಸವ
ಪ್ರತಿ ವರ್ಷ ಸಿದ್ದಪ್ಪಜ್ಜನ ರಥೋತ್ಸವದ ಅಂಗವಾಗಿ ಮೂರು ದಿನ ಸಿದ್ಧಶ್ರೀ ಉತ್ಸವ ಆಚರಿಸಲಾಗುತ್ತಿತ್ತು. ರಾಜ್ಯ ಸೇರಿದಂತೆ ಹೊರ ರಾಜ್ಯದಿಂದ ನಾನಾ ಕಲಾವಿದರು ಆಗಮಿಸಿ ಕಲೆಯ ಪ್ರದರ್ಶನ ನೀಡುತ್ತಿದ್ದರು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಮೂರು ದಿನಗಳ ಉತ್ಸವವನ್ನು ರದ್ದುಗೊಳಿಸಲಾಗಿದೆ. ಕೋವಿಡ್ ನಿಯಮಕ್ಕೆ ಒಳಪಟ್ಟು ಸರಳ ರಥೋತ್ಸವ ಹಾಗೂ ಸಿದ್ದಶ್ರೀ ಪ್ರಶಸ್ತಿ ಸಮಾರಂಭ ಆಯೋಜಿಸಲಾಗಿದ್ದು ಭಕ್ತರು ಸಹಕರಿಸಬೇಕು ಎಂದು ಡಾ.ಶಿವಕುಮಾರ ಸ್ವಾಮೀಜಿ ವಿನಂತಿಸಿದರು.