ಬಾಗಲಕೋಟೆ
ಹುಬ್ಬಳ್ಳಿಯಲ್ಲಿ ಹಿಂದು ಯುವತಿಯ ಬರ್ಬರ ಹತ್ಯೆ ಘಟನೆಯನ್ನು ಎನ್‌ಐಎ ತನಿಖೆಗೆ ಒಳಪಡಿಸಬೇಕು ಹಾಗೂ ಆರೋಪಿಯ ಶೀಘ್ರ ವಿಚಾರಣೆ ನಡೆಸಿ ತ್ವರಿತ ನ್ಯಾಯಾಲಯದ ಮೂಲಕ ಗಲ್ಲುಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಹಿಂದು ಜಾಗರಣ ವೇದಿಕೆಯಿಂದ ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಎದುರು ಪ್ರತಿಭಟನೆ ನಡೆಯಿತು.
ವೇದಿಕೆ ಮುಖಂಡ ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಲವ್ ಜಿಹಾದ್‌ಗೆ ಮತ್ತೊಬ್ಬ ಹಿಂದು ಯವತಿಯ ಬಲಿಯಾಗಿದೆ. ಪ್ರೀತಿಸಲು ನಿರಾಕರಿಸಿದ ವಿದ್ಯಾರ್ಥಿನಿಯನ್ನು ಹಾಡಹಗಲೇ ಸಾರ್ವಜನಿಕವಾಗಿ ಬರ್ಬರವಾಗಿ ಕೊಲೆ ಮಾಡಿದ್ದು ಹೇಯ ಕೃತ್ಯವಾಗಿದೆ. ಕೆಲ ಮತಾಂಧರು ದೇಶಾದ್ಯಂತ ಬಾಂಬ್ ಸ್ಪೋಟ, ದೊಂಬಿ, ಗಲಭೆ, ಹಿಂದುಗಳ ಹತ್ಯೆಯಂತಹ ಕೃತ್ಯಗಳ ಮೂಲಕ ಹಿಂದು ಸಮಾಜದ ವಿರುದ್ಧ ಯುದ್ಧ ಸಾರಿದಂತೆ ತೋರುತ್ತಿದೆ ಎಂದು ದೂರಿದರು.
ಹಿಂದು ಯುವತಿಯರನ್ನು ಪ್ರೀತಿಯ ಹೆಸರಲ್ಲಿ ಮೋಸಗೊಳಿಸಿ ಇಸ್ಲಾಂಗೆ ಮತಾಂತರದ ಮೂಲಕ ತಮ್ಮ ಧರ್ಮದ ಜನಸಂಖ್ಯೆ ಹೆಚ್ಚಿಸಿಕೊಳ್ಳುವ ಕುತಂತ್ರದ ಜಾಲವೇ ಲವ್ ಜೆಹಾದ್ ಹೆಸರಿನ ಜಿಹಾದಿ ಕೃತ್ಯವಾಗಿದೆ. ರಾಜ್ಯಾದ್ಯಂತ ಕೆಲ ವರ್ಷಗಳಿಂದ ಇಂತಹ ಘಟನೆ ನಡೆಯುತ್ತಿದ್ದರು ಸರಕಾರಗಳು ಇಂತಹ ಚಟುವಟಿಕೆಗೆ ಸೂಕ್ತ ಕಡಿವಾಣ ಹಾಕುತ್ತಿಲ್ಲ. ಲವ್ ಜಿಹಾದಿ ಕುರಿತು ಸಮಗ್ರ ತನಿಖೆ ನಡೆಯುತ್ತಿಲ್ಲ. ಅಕಾರದಲ್ಲಿರುವವರು ಹಿಂದು ಮಹಿಳೆಯರ ರಕ್ಷಣೆಗೆ ತೋರುತ್ತಿರುವ ನಿರ್ಲಕ್ಷ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೀಗ ಹುಬ್ಬಳ್ಳಿಯಲ್ಲಿ ನಡೆದಿರುವ ಕೃತ್ಯದಂತೆ ಹಲವು ಕೃತ್ಯಗಳು ಕಳೆದ ಕೆಲ ವರ್ಷದಿಂದ ರಾಜ್ಯದಲ್ಲಿ ನಡೆದಿದ್ದರೂ ಅದರ ಹಿಂದಿರುವ ಜೆಹಾದಿ ಕುತಂತ್ರ ಮತ್ತು ಜಾಲ ಭೇದಿಸಲು ರಾಜ್ಯ ಪೊಲೀಸರು ವಿಫಲರಾಗಿದ್ದಾರೆ. ರಾಜಕೀಯ ಒತ್ತಡ ಮತ್ತು ಪೊಲೀಸ್ ಇಲಾಖೆಯಲ್ಲಿನ ಇಚ್ಛಾಸಕ್ತಿ ಕೊರತೆಯೇ ಇದಕ್ಕೆಲ್ಲ ಕಾರಣವಾಗಿದೆ. ಇದರಿಂದ ಜೆಹಾದಿಗಳಿಗೆ ಇಂತಹ ಕೃತ್ಯಕ್ಕೆ ಕಾನೂನು ಭಯವಿಲ್ಲದಂತಾಗಿದೆ.
ಈ ಕೃತ್ಯದ ಕುರಿತು ತನಿಖೆಯನ್ನು ಎನ್‌ಐಎಗೆ ವಹಿಸಬೇಕು. ಶೀಘ್ರ ವಿಚಾರಣೆ ನಡೆಸಿ ತ್ವರಿತ ನ್ಯಾಯಾಲಯದ ಮೂಲಕ ಗಲ್ಲುಶಿಕ್ಷೆಗೆ ಒಳಪಡಿಸಬೇಕು. ಆಡಳಿತ ನಿರ್ಲಕ್ಷ ತೋರಿದರೆ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಹಿಂದು ಜಾಗರಣ ವೇದಿಕೆ ಮುಂದಾಗಲಿದೆ ಎಂದು ಹೇಳಿದರು.
ನಾಗೇಶ ಅಂಬಿಗೇರ, ನಾಗರಾಜ ಬಾರಕೇರ ಸೇರಿದಂತೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಇದ್ದರು.